ಉದಯವಾಹಿನಿ ಪುಣೆ: ದೇಶದಲ್ಲಿ ಟೊಮೆಟೊ ಬೆಲೆ ತಿಂಗಳ ಹಿಂದೆ ಪ್ರತಿ ಕೆಜಿಗೆ ಸುಮಾರು ೨೦೦ ರೂಪಾಯಿಗೆ ಏರಿಕೆಯಾಗಿ ಗಗನಕ್ಕೇರಿದ್ದ ಬೆನ್ನಲ್ಲೇ ಇದೀಗ ಪ್ರತಿ ಕೆಜಿಗೆ ೩-೫ ರೂ.ಗೆ ಕುಸಿದಿದೆ.ಇದು ಮಹಾರಾಷ್ಟ್ರದ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಟೊಮೆಟೊ ಬಂಪರ್ ಇಳುವರಿ ಮತ್ತು ಲಾಭ ಪಡೆದ ನಂತರ ಟೊಮೆಟೊ ಬೆಲೆ ಗಗನದಿಂದ ಪಾತಾಳಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾರುಕಟ್ಟೆ ಏರಿಳಿತಗಳನ್ನು ತಡೆಯಲು ಟೊಮೆಟೊ ಮತ್ತು ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ಒಂದೇ ಮಾರ್ಗವಾಗಿದೆ ಎಂದು ನಾಸಿಕ್‌ನ ಕೃಷಿ ಕಾರ್ಯಕರ್ತ ಸಚಿನ್ ಹೋಳ್ಕರ್ ಹೇಳಿದ್ದಾರೆ.
ಕೈಗೆಟುಕುವ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದ ಕೆಲವೇ ರೈತರು, ತಮ್ಮ ಹೂಡಿಕೆಯ ಅರ್ಧದಷ್ಟು ಹಣವನ್ನು ಸಹ ಪಡೆಯಲು ಸಾಧ್ಯವಾಗುತ್ತಿಲ್ಲ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯಲು ರೈತನಿಗೆ ೨ ಲಕ್ಷ ಬಂಡವಾಳ ಬೇಕು ಆದರೆ ಈಗಿನ ಬೆಲೆಯಲ್ಲಿ ಹಾಕಿದ ಬಂಡವಾಳವೂ ಬರುತ್ತಿಲ್ಲ ಎನ್ನುವುದು ಬೆಳೆಗಾರರ ಅಳಲು.
ರಾಜ್ಯ ಕೃಷಿ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ನಾಸಿಕ್ ಜಿಲ್ಲೆಯಲ್ಲಿ ಸರಾಸರಿ ಟೊಮೆಟೊ ವಿಸ್ತೀರ್ಣ ಸುಮಾರು ೧೭,೦೦೦ ಹೆಕ್ಟೇರ್ ಆಗಿದ್ದು, ೬ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಆದರೆ ಈ ವರ್ಷ ೩೫,೦೦೦ ಹೆಕ್ಟೇರ್‍ನಲ್ಲಿ ಟೊಮೆಟೊ ಬೆಳೆ ದ್ವಿಗುಣಗೊಂಡಿದ್ದು, ಅಂದಾಜು ೧೨.೧೭ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ.
