ಉದಯವಾಹಿನಿ, ಮಧುಗಿರಿ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಿಡಿಗೇಶಿ ಕೆಶಿಪ್ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.
ಪಾವಗಡ ತಾಲ್ಲೂಕಿನ ಗುಜ್ಜನುಡು ಗ್ರಾಮದ ಆಕಾಶ್ (೨೬), ಕಾರ್ತಿಕ್ (೨೮) ಹಾಗೂ ಹೇಮಂತ್ (೩೦) ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು. ಉಜ್ವಲ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇಂದು ಬೆಂಗಳೂರು ಬಂದ್ ಇದ್ದ ಕಾರಣ ಗ್ರಾಮದಲ್ಲಿ ನಡೆಯುತ್ತಿದ್ದ ಮಾರಮ್ಮ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಬೆಂಗಳೂರಿನಿಂದ ಬರುತ್ತಿದ್ದ ಲಾರಿ ಮಿಡಿಗೇಶಿ ಬಳಿ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ಮುಂಭಾಗದ ತಿರುವಿನಲ್ಲಿ ಕಾರಿಗೆ ಮುಖಾಮುಖಿಯಾಗಿ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
