ಉದಯವಾಹಿನಿ, ಮೈಸೂರು: ತಮಿಳುನಾಡಿಗೆ ನದಿ ಮೂಲಕ ನೀರು ಹರಿಸುತ್ತಿರುವ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು. ಇದರಿಂದಾಗಿ ಸಾಂಸ್ಕೃತಿಕ ನಗರಿಯಲ್ಲೂ ಕಾವೇರಿ ಹೋರಾಟ ಕಾವು ಪಡೆದುಕೊಂಡಿದೆ.
ಪ್ರತ್ಯೇಕವಾಗಿ ನಡೆದ ಪ್ರತಿಭಟನಾ ಸ್ಥಳಗಳಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳು ಮೊಳಗಿದವು. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನೂ ಕೂಡಲೇ ಸ್ಥಗಿತಗೊಳಿಸಬೇಕು ಎಂದೂ ಆಗ್ರಹಿಸಿದರು.
ರಾಜ್ಯದಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ವಾಡಿಕೆಯಷ್ಟು ಮಳೆ ಆಗಿಲ್ಲ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಕಾವೇರಿ ಕಣಿವೆ ಭಾಗದಲ್ಲಿ ಬರ ಪರಿಸ್ಥಿತಿ ಇದೆ. ಕೆಆರ್‍ಎಸ್ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರಿಗಿಂತ ಕಡಿಮೆ ಮಾತ್ರ. ಅದರಲ್ಲಿ ಬಳಕೆಗೆ ಸಿಗುವುದು 15 ಟಿಎಂಸಿ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾ„ಕಾರ ತಮಿಳುನಾಡಿಗೆ 7 ಟಿಎಂಸಿ ನೀರು ಹರಿಸಲು ಆದೇಶಿಸಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೆ ಒಂದುವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲ ಗದ್ದೆಗಳಿಗೆ ಎಲ್ಲಿಂದ ನೀರು ತರಲು ಸಾಧ್ಯ. ರೈತರು ನೀರಿಗಾಗಿ ಏನು ಮಾಡಬೇಕು? ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಪ್ರಾ„ಕಾರದ ಆದೇಶ ಪಾಲಿಸಬಾರದು ಎಂದು ಆಗ್ರಹಿಸಿದರು.
