ಉದಯವಾಹಿನಿ, ರೋಟರ್‌ಡ್ಯಾಮ್: ಅವಳಿ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟ ಘಟನೆ ರೋಟರ್‌ಡ್ಯಾಮ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದೂಕುಧಾರಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ಹೆಸರು ಫೌದ್ ಎಲ್. ಎಂದು ಹೇಳಲಾಗಿದೆ. ಈತ ಸುಮಾರು ೩೨ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಮನೆಯೊಂದಕ್ಕೆ ಬೆಂಕಿ ಹಚ್ಚುವ ಮೊದಲು ಗುಂಡು ಹಾರಿಸಿದ್ದು, ಅಲ್ಲದೆ ನಗರದ ಎರಾಸ್ಮಸ್ ವೈದ್ಯಕೀಯ ಕೇಂದ್ರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಈತ ಇದೇ ಎರಾಸ್ಮಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕೂಡ ಆಗಿದ್ದಾನೆ ಎನ್ನಲಾಗಿದೆ. ಇನ್ನು ವೈದ್ಯಕೀಯ ಕೇಂದ್ರದಲ್ಲಿ ನಡೆಸಿದ ದಾಳಿಯಲ್ಲಿ ೩೯ ವರ್ಷದ ಮಹಿಳೆ ಹಾಗೂ ಆಕೆಯ ೧೪ರ ಹರೆಯದ ಮಗಳು ಮೃತಪಟ್ಟಿದ್ದಾರೆ. ಅಲ್ಲದೆ ೪೩ ವರ್ಷದ ಪುರುಷ ಉಪನ್ಯಾಸಕರೊಬ್ಬರು ಗಂಭೀರ ಗಾಯಗೊಂಡಿದ್ದು, ಆದರೆ ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಸದ್ಯ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮುಖಕ್ಕೆ ವಸ್ತ್ರ ಧರಿಸಿ ಆಸ್ಪತ್ರೆಯಿಂದ ಆರೋಪಿಯನ್ನು ಪೊಲೀಸರು ಕರೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಆದರೆ ಈತ ಯಾವ ಉದ್ದೇಶ ಇಟ್ಟುಕೊಂಡು ದಾಳಿ ನಡೆಸಿದ್ದ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.
