ಉದಯವಾಹಿನಿ, ಕೋಲಾರ: ಕರ್ನಾಟಕದಲ್ಲೇ ಹುಟ್ಟಿ ಕರ್ನಾಟಕದಲ್ಲೇ ಹರಿಯುವ ಕಾವೇರಿ ನೀರನ್ನು ಸಂಕಷ್ಟದ ಸಮಯದಲ್ಲೂ ತಮಿಳುನಾಡಿಗೆ ಹರಿಸುವ ಸರ್ಕಾರದ ನಿರ್ಧಾರ ಖಂಡನೀಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ತಿಳಿಸಿದರು.ಕಾವೇರಿಗಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ ವಕೀಲರು ನ್ಯಾಯಾಲಯ ಕಲಾಪಗಳಿಂದ ದೂರವುಳಿದು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ, ಕಾವೇರಿ ನಮ್ಮದು ಎಂದು ಘೋಷಣೆಗಳೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಸತತವಾಗಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರದ ಮುಂದೆ ತನ್ನ ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ಹಾಹಾಕಾರ ಎದುರಾಗುವ ಭೀತಿ ಇದೆ ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಹೇಳುವ ಮೂಲಕ ರಾಜ್ಯದ ಹಿತ ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.
ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ರಾಜ್ಯದ ಹಿತ ಬಲಿಕೊಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು, ಅಧಿಕಾರಕ್ಕೆ ಅಂಟಿಕೊಂಡು ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವ ಸರ್ಕಾರದ ನೀತಿ ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು, ಖಜಾಂಚಿ ನವೀನ್,ಜಂಟಿ ಕಾರ್ಯದರ್ಶಿ ರೆಡ್ಡಪ್ಪ, ವಕೀಲರಾದ ಎ.ಲಕ್ಷ್ಮೀನಾರಾಯಣ, ಕೆ.ಆರ್.ಧನರಾಜ್,ಸಿ.ವೆಂಕಟರೆಡ್ಡಿ, ಕಂಜುನೇತ್ರಿ, ಮುನಿರತ್ನ, ಜಯರಾಂ, ಸಿ.ರಾಮಕೃಷ್ಣ, ಎ.ವಿ.ಆನಂದ್, ಸೋಮಶೇಖರ್, ಗೋವಿಂದಪ್ಪ, ಲೋಕೇಶ್, ಗಣೇಶ್, ಮತ್ತಿತರರು ಪಾಲ್ಗೊಂಡಿದ್ದರು.
