
ಉದಯವಾಹಿನಿ, ಬೆಂಗಳೂರು: ಹೆದ್ದಾರಿ ಹಾಗೂ ಎಕ್ಸ್‍ಪ್ರೆಸ್ ಹೈವೇಗಳಲ್ಲಿ ಪ್ರಯಾಣಿಸುವಾಗ ಒಂದು ಕ್ಷಣ ಎಚ್ಚರ ತಪ್ಪಿದರೂ ಪ್ರಾಣ ಕಂಟಕವಾಗಲಿದೆ ಎಂಬುದಕ್ಕೆ ಬೆಂಗಳೂರಿನ ಹೊರವಲಯದ ಸೋಂಪುರದ ಬಳಿಯ ನೈಸ್‍ರಸ್ತೆಯಲ್ಲಿ ನಡೆದ ಅಪಘಾತ ಸ್ಪಷ್ಟ ಉದಾಹರಣೆಯಾಗಿದೆ.
ಟಾಟಾ ನೆಕ್ಸಾನ್ ಕಾರಿನಲ್ಲಿ ಮುಂಜಾನೆ 2.30ರ ಸುಮಾರಿಗೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಮಹೇಂದ್ರನ್ ರವರು ನೈಸ್ ರಸ್ತೆಯಲ್ಲಿರುವಾಗ ನೀರು ಕುಡಿಯಲು ಬಾಟಲ್ ತೆಗೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ.
ಅಪಘಾತದ ರಭಸಕ್ಕೆ ಕಾರಿನಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಒಳಗಿದ್ದವರನ್ನು ರಕ್ಷಿಸಲು ಏರ್‍ಬ್ಯಾಗ್ ಅದೇ ವೇಳೆ ತೆರೆದುಕೊಂಡಿದೆ. ಅಪಘಾತದ ತಕ್ಷಣವೇ ಕಾರಿನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದ್ದು, ಸೋಟಗೊಂಡಿದೆ. ಘಟನೆಯಿಂದ ಆಘಾತಕ್ಕೊಳಗಾದವರು ಏರ್‍ಬ್ಯಾಗ್ ಅನ್ನು ಸಡಿಲಿಸಿ ಹೊರಬರುವುದರೊಳಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ತಾಯಿ ಮತ್ತು ಮಗಳು ಸಜೀವ ದಹನವಾಗಿದ್ದಾರೆ.
ಎಕ್ಸ್‍ಪ್ರೆಸ್ ಹೈವೇಗಳಲ್ಲಿ ಕಾರು ಚಾಲನೆ ಮಾಡುವವರು ಕನಿಷ್ಟ 70 ರಿಂದ 80 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿರುತ್ತಾರೆ. ಕೆಲವೊಮ್ಮೆ ಅದು 120 ಕಿಲೋ ಮೀಟರ್ ಹೋಗುವ ಸಾಧ್ಯತೆ ಇದೆ. ಅದರಲ್ಲೂ ಮಧ್ಯರಾತ್ರಿ ಎಂದರೆ ರಸ್ತೆ ಖಾಲಿ ಇರುವುದರಿಂದ ವೇಗವೂ ಕೂಡ ಇಮ್ಮಡಿಗೊಂಡಿರುತ್ತದೆ. ನಿದ್ದೆಯ ಮಂಪರು ಕೂಡ ಸಾಮಾನ್ಯವಾಗಿರುತ್ತದೆ.
