ಉದಯವಾಹಿನಿ,ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಭಾರೀ ಕುಂಠಿತವಾಗುತ್ತಿದ್ದು, ೨.೭೯ ಲಕ್ಷ ಬೀದಿ ನಾಯಿಗಳ ಪೈಕಿ ಶೇಕಡ ೭೧.೮೫ರಷ್ಟು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಬಿಬಿಎಂಪಿ ಅಧಿಕೃತವಾಗಿ ಪ್ರಕಟಿಸಿದೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳ ಸಮೀಕ್ಷೆ ನಡೆಸಿರುವ ವರದಿ ಅನ್ನು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಪಾಲಿಕೆಯ ೮ ವಲಯಗಳಲ್ಲಿ ಒಟ್ಟು ೨೭, ೯೩೩೫ ಬೀದಿನಾಯಿಗಳು ಕಂಡುಬಂದಿರುತ್ತದೆ. ೨೦೧೯ನೇ ಸಾಲಿನ ಬೀದಿನಾಯಿಗಳ ಸಮೀಕ್ಷೆಯಲ್ಲಿ ೩.೧೦ ಲಕ್ಷ ಬೀದಿನಾಯಿಗಳು ಇರುವುದಾಗಿ ಮತ್ತು ಶೇಕಡ ೫೧.೧೬ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿರುವುದಾಗಿ ಅಂದಾಜಿಸಲಾಗಿತ್ತು.
ಹಾಲಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಒಟ್ಟು ಶೇಕಡ ೭೧.೮೫ ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದ್ದು, ಒಟ್ಟಾರೆಯಾಗಿ ಶೇಕಡ ೨೦ ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ. ಬೀದಿನಾಯಿ ಮರಿಗಳ ಸಂಖ್ಯೆಯು ಕಡಿಮೆಯಾಗಿರುತ್ತದೆ. ಪ್ರಸ್ತುತ ಸಾಲಿನ ಸಮೀಕ್ಷೆಯ ವರದಿಯಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ ೧೦ ರಷ್ಟು ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.
