ಉದಯವಾಹಿನಿ, ನವದೆಹಲಿ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಕೇಂದ್ರದಿಂದ ಹಲವು ಯೋಜನೆಗಳಿಂದ ಪಶ್ಚಿಮ ಬಂಗಾಳಕ್ಕೆ ಸುಮಾರು ₹ 15,000 ಕೋಟಿ ಬಂದಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ವೇಳೆ ತಮ್ಮ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಚೇರಿಗೆ ತೆಗೆದುಕೊಂಡು ಹೋಗಿದ್ದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಹಾಗೂ ಟಿಎಂಸಿ ಸಂಸದ ಡೇರೆಕ್ ಓಬ್ರೇಯಾನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಇಂದು ಬೆಳಿಗ್ಗೆ ಬಿಡುಗಡೆಯಾಗಿರು ಅವರು, ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ನಿನ್ನೆ ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ದಾಳಿ ನಡೆದು ಹಲವಾರು ಪತ್ರಕರ್ತರನ್ನು ಬಂಧಿಸಿದ್ದಾರೆ. ಅನುದಾನ ಕೇಳಲು ಬಂದ ನಮ್ಮನ್ನೂ ಬಂದಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ಅಭಿಷೇಕ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸಚಿವರು ನಮ್ಮನ್ನು ಭೇಟಿಯಾಗದೇ ಹೋಗಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಹಾಳಾಗಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಬಂಧನದ ವೇಳೆ ನಮ್ಮ ಹಾಗೂ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಅನೇಕ ನಮ್ಮ ಮಹಿಳಾ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಕುರಿತು ದೂರು ದಾಖಲು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
