ಉದಯವಾಹಿನಿ, ವಾಶಿಮ್(ಮಹಾರಾಷ್ಟ್ರ): ಎಮ್ಮೆಯೊಂದು ₹1.5 ಲಕ್ಷ ಬೆಲೆಬಾಳುವ ಚಿನ್ನದ ಮಂಗಳಸೂತ್ರವನ್ನು ನುಂಗಿರುವ ಘಟನೆ ಮಹಾರಾಷ್ಟ್ರದ ವಾಶಿಮ್ ಎಂಬ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಅಡುಗೆಗಾಗಿ ಬೇಳೆಕಾಳುಗಳನ್ನು ಸ್ವಚ್ಛ ಮಾಡಿ ಅದೇ ತಟ್ಟೆಯಲ್ಲಿಯೇ ಮಂಗಳಸೂತ್ರವನ್ನು ತೆಗೆದಿಟ್ಟು, ಸ್ನಾನಕ್ಕೆ ತೆರಳಿದ್ದಾರೆ.ಬೇಳೆಕಾಳು ಶುಚಿಗೊಳಿಸಿ ಉಳಿದಿದ್ದ ಹೊಟ್ಟು ತಿನ್ನುವ ಸಮಯದಲ್ಲಿ ಎಮ್ಮೆಯು ತಟ್ಟೆಯಲ್ಲಿ ಇದ್ದ ಮಂಗಳಸೂತ್ರವನ್ನೂ ನುಂಗಿದೆ.
ಈ ಘಟನೆ ಬಗ್ಗೆ ಮಹಿಳೆ ತನ್ನ ಗಂಡನಿಗೆ ಮಾಹಿತಿ ನೀಡಿದ್ದಾರೆ. ಆತನು ಪಶು ವೈದ್ಯರನ್ನು ಕರೆ ತಂದಿದ್ದಾರೆ. ವೈದ್ಯರು ಮೆಟಲ್ ಡಿಟೆಕ್ಟರ್ ಬಳಸಿ ಎಮ್ಮೆಯ ಹೊಟ್ಟೆ ಒಳಗೆ ಮಂಗಳಸೂತ್ರ ಇದೆ ಎಂಬುವುದನ್ನು ಖಚಿತಪಡಿಸಿದ್ದಾರೆ.ಪಶು ವೈದ್ಯರ ತಂಡವು ಎಮ್ಮೆಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮಂಗಳಸೂತ್ರವನ್ನು ಯಶ್ವಸಿಯಾಗಿ ಹೊರೆಗೆ ತೆಗೆದಿದ್ದಾರೆ. ಎಮ್ಮೆಯ ಹೊಟ್ಟೆ ಭಾಗಕ್ಕೆ 60 ರಿಂದ 65 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಬಾಳಸಾಹೇಬ್ ಎಂಬ ಆರೋಗ್ಯ ಅಧಿಕಾರಿ ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿದ ಅವರು, ಮೆಟಲ್ ಡಿಟೆಕ್ಟರ್‌ನಿಂದಾಗಿ ಎಮ್ಮೆ ಹೊಟ್ಟೆಯಲ್ಲಿರುವ ಚಿನ್ನ ಪತ್ತೆ ಹಚ್ಚಲು ಸಹಾಯವಾಯಿತು. ಶಸ್ತ್ರ ಚಿಕಿತ್ಸೆ ಸುಮಾರು 2 ಗಂಟೆ ಕಾಲ ತೆಗೆದುಕೊಂಡಿದೆ. ಪ್ರಾಣಿಗಳನ್ನು ಸಾಕುವವರು, ಅವುಗಳ ಬಗ್ಗೆ ಎಚ್ಚರವಹಿಸಿ ಎಂದು ಸಲಹೆ ನೀಡಿದ್ದಾರೆ.
