ಉದಯವಾಹಿನಿ, ಬೀಜಿಂಗ್: ಒಂದೆಡೆ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ದ ನಡೆಯುತ್ತಿದ್ದರೆ ಮತ್ತೊಂದೆಡೆ ಕಮ್ಯುನಿಸ್ಟ್ ಚೀನಾ ಹಾಗೂ ತೈವಾನ್ ನಡುವಿನ ಭವಿಷ್ಯದಲ್ಲಿ ಯುದ್ದದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ತಿಂಗಳಷ್ಟೇ ತೈವಾನ್ ಗಡಿ ಪ್ರದೇಶದಲ್ಲಿ ಚೀನಾದ ೧೦೦ಕ್ಕೂ ಹೆಚ್ಚಿನ ಯುದ್ದ ವಿಮಾನಗಳು ಸಮರಾಭ್ಯಾಸ ನಡೆಸಿದ್ದು, ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ನೆರೆ ರಾಷ್ಟ್ರಗಳನ್ನು ಕೆಣಕಿ ಯುದ್ದದ ಪರಿಸ್ಥಿತಿ ನಿರ್ಮಿಸುವ ಮೂಲಕ ಬೆದರಿಕೆ ಒಡ್ಡುತ್ತಿರುವ ಕುಟಿಲ ಮನಸ್ಥಿತಿಯ ಚೀನಾ ಇದೀಗ ತೈವಾನ್ ಮೇಲೆ ತನ್ನ ವಕ್ರದೃಷ್ಟಿ ಹರಿಸಿದೆ. ಅತ್ತ ಯುದ್ದವೂ ಅಲ್ಲ, ಇತ್ತ ಕಡೆ ಶಾಂತಿಯೂ ಅಲ್ಲದ ಪರಿಸ್ಥಿತಿಯನ್ನು ಮಿಲಿಟರಿ ಭಾಷೆಯಲ್ಲಿ ಬೂದು ವಲಯ (ಗ್ರೇ ಝೋನ್) ಎಂದು ಕರೆಯಲಾಗುತ್ತದೆ. ಸದ್ಯ ಚೀನಾ ಇದೇ ನೀತಿಯನ್ನು ಅನುಸರಿಸುತ್ತಿದೆ. ಕಳೆದ ತಿಂಗಳು ತೈವಾನ್ ಬಳಿ ಚೀನಾದ ೧೦೩ ಯುದ್ದ ವಿಮಾನಗಳು ಹಾರಾಟ ನಡೆಸಿದ್ದವು. ಈ ಪೈಕಿ ೪೦ ವಿಮಾನಗಳು ತೈವಾನ್‌ನ ಏರ್ ಡಿಫೆನ್ಸ್ ಐಡೆಂಟಿಫಿಕೇಶನ್ ಝೋನ್ (ಎಡಿಐಝೆಡ್) ಕೂಡ ಪ್ರವೇಶಿಸಿ, ಉದ್ದಟತನ ಪ್ರದರ್ಶಿಸಿದ್ದವು. ಆದರೆ ಚೀನಾ ಮಾತ್ರ ಈ ರೇಖೆಯೇ ಅಸ್ತಿತ್ವದಲ್ಲಿಲ್ಲ, ಇದನ್ನು ನಾವು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ತೈವಾನ್ ಮೇಲೆ ಕಳೆದ ಹಲವು ವರ್ಷಗಳಿಂದ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾ, ಇತ್ತೀಚಿಗಿನ ವರ್ಷಗಳಲ್ಲಿ ದ್ವೀಪ ರಾಷ್ಟ್ರದ ಸನಿಹದಲ್ಲಿ ಹಲವು ರೀತಿಯ ಸಮರಾಭ್ಯಾಸಗಳನ್ನು ನಡೆಸಿ, ವಿರೋಧಿ ರಾಷ್ಟ್ರಗಳಿಗೆ ಪರೋಕ್ಷೆ ಎಚ್ಚರಿಕೆ ನೀಡಿದೆ. ಸದ್ಯ ಚೀನಾವು ಬೂದು ವಲಯ (ಶಾಂತಿ ಹಾಗೂ ಯುದ್ದದ ನಡುವಿನ ಭಾಗ)ದಲ್ಲೇ ಮುಂದುವರೆದಿದ್ದು, ಯಾವುದೇ ಸಮಯದಲ್ಲಿ ಕೂಡ ಉದ್ದಟತನ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!