ಉದಯವಾಹಿನಿ, ಚೆನ್ನೈ, : ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಮಂಗಳವಾರ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕತ್ವವು ಎಐಎಡಿಎಂಕೆಯೊಂದಿಗೆ ಮೈತ್ರಿ ಮುಂದುವರಿಸಲು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಿಯೂಷ್ ಗೋಯಲ್ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಅಣ್ಣಾಮಲೈ ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ. ಈ ನಿಲುವುಗಳಿಗೆ ತಾವು ಬದ್ಧರಿರುವುದಾಗಿ ಹೇಳಿದ್ದಾರೆ.ದ್ರಾವಿಡರ ನಾಡಾದ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ತಾವು ರೂಪಿಸಿರುವ ಯೋಜನೆಗಳು ಮತ್ತು ಕಾರ್ಯತಂತ್ರಗಳ ನೀಲನಕ್ಷೆಯನ್ನು ಬಿಜೆಪಿ ನಾಯಕರಿಗೆ ಅಣ್ಣಾಮಲೈ ನೀಡಿದ್ದಾರೆ.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳದೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಬೇಕಿದೆ. ಮುಂದಿನ 6 ತಿಂಗಳವರೆಗೆ ನಾವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅಣ್ಣಾಮಲೈ ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದಾರೆ.ತಮಿಳುನಾಡಿನಲ್ಲಿ ಮುಂದಿನ ಆರು ತಿಂಗಳ ಕಾಲ ತಾವು ಅನುಸರಿಸಲಿರುವ ಕಾರ್ಯತಂತ್ರಗಳ ಕುರಿತು ಅಣ್ಣಾಮಲೈ ಬಿಜೆಪಿ ಹೈಕಮಾಂಡ್‌ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಣ್ಣಾಮಲೈ ಅವರ ಮುಂದಿನ ಕಾರ್ಯತಂತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ಕುಲಂಕೂಷವಾಗಿ ವಿಚಾರಿಸಲಿದೆ ಎಂದು ತಿಳಿದುಬಂದಿದೆ. ಆ ನಂತರ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ.
