ಉದಯವಾಹಿನಿ, ತೆಹ್ರಾನ್ : ಇರಾನ್‌ನಲ್ಲಿ ಹಿಜಾಬ್ ಧರಿಸದ ಮಹಿಳೆಯರ ವಿರುದ್ಧ ದೌರ್ಜನ್ಯ ಮತ್ತೆ ಮುಂದುವರೆದಿದೆ. ಹಿಜಾಬ್ ಧರಿಸದ ಆರೋಪದಲ್ಲಿ ಇರಾನ್‌ನ ನೈತಿಕ ಪೊಲೀಸರ ತಂಡವೊಂದು ಬಾಲಕಿಯನ್ನು ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗಂಭೀರ ಗಾಯಗೊಂಡಿರುವ ಬಾಲಕಿ, ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ ಎನ್ನಲಾಗಿದೆ.
ಅರ್ಮಿತಾ ಗೆರಾವಂಡ್ (೧೬) ಎಂಬ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಈಕೆ ಶೋಹಾಡಾ ನಿಲ್ದಾಣದಲ್ಲಿ ಟೆಹ್ರಾನ್ ಮೆಟ್ರೋ ರೈಲು ಬಳಿಕ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ. ಬಾಲಕಿಯು ಮೂರ್ಛೆ ಹೋಗಿದ್ದು, ಮತ್ತು ರೈಲಿನಲ್ಲಿ ಪ್ರಜ್ಞಾಹೀನಳಾಗುತ್ತಿರುವ ಕಂಡುಬಂದ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾಋ?ಗಳು ಬಿಡುಗಡೆ ಮಾಡಿದ್ದಾರೆ. ಆದರೆ ಮಾನವ ಹಕ್ಕುಗಳ ಗುಂಪು ಹಂಗಾವ್, ಆಕೆಯ ಮೇಲೆ ನೈತಿಕ ಪೊಲೀಸ್ ಅಧಿಕಾರಿಗಳು ತೀವ್ರ ರೀತಿಯಲ್ಲಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.
ಸದ್ಯ ಕೋಮಾದಲ್ಲಿರುವ ಅರ್ಮಿತಾಗೆ ಬಿಗಿ ಭದ್ರತೆಯಲ್ಲಿ ತೆಹ್ರಾನ್‌ನ ಫಜ್ರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲದೆ ಆಕೆಯ ಕುಟುಂಬದ ಎಲ್ಲಾ ಸದಸ್ಯರ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ. ಅದೂ ಅಲ್ಲದೆ ಪ್ರಕರಣದ ಬಗ್ಗೆ ವರದಿ ಮಾಡಲು ತೆರಳಿದ ಶಾರ್ಕ್ ಪತ್ರಿಕೆಯ ಪತ್ರಕರ್ತೆಯೊಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇರಾನ್‌ನ ಕಾನೂನಿನ ಪ್ರಕಾರ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಪಾಲಿಸದವರ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಅಲ್ಲದೆ ಕಳೆದ ವರ್ಷ ಹಿಜಾಬ್ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಪಡೆದುಕೊಂಡು, ಸರ್ಕಾರದ ವಿರುದ್ಧ ಆಕ್ರೋಶ ಕೂಡ ಕೇಳಿಬಂದಿತ್ತು.
