ಉದಯವಾಹಿನಿ, ಮಾಸ್ಕೋ: ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸಿದ್ದ ರಷ್ಯಾದ ಪತ್ರಕರ್ತೆ ಮರಿನಾ ಒಸ್ಯಾವನಿಕೋವಗೆ ದೇಶದ ಸೇನೆಯ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿದ ಅಪರಾಧಕ್ಕೆ ೮ ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧಿಕಾರಿಗಳ ಕಚೇರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
೪೫ ವರ್ಷದ ಒಸ್ಯಾವನಿಕೋವ ೨೦೨೨ರ ಮಾರ್ಚ್‌ನಲ್ಲಿ ನಡೆದ ಟಿವಿ ಕಾರ್ಯಕ್ರಮದಲ್ಲಿ ಉಕ್ರೇನ್ ಯುದ್ಧವನ್ನು ಟೀಕಿಸುವ ಮತ್ತು ಖಂಡಿಸುವ ಫಲಕವನ್ನು ಎತ್ತಿಹಿಡಿದಿದ್ದರು. ಆದರೆ ಈಗ ವಿಧಿಸಿರುವ ಶಿಕ್ಷೆ ೪ ತಿಂಗಳ ಬಳಿಕ ಮಾಸ್ಕೋದಲ್ಲಿ ಆಕೆ ನಡೆಸಿದ ಪ್ರತ್ಯೇಕ ಪ್ರತಿಭಟನೆಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಒಸ್ಯಾವನಿಕೋವ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆದು ೮ ವರ್ಷ ೬ ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಜತೆಗೆ ೪ ವರ್ಷ ಸಾಮಾಜಿಕ ಮಾಧ್ಯಮ ಖಾತೆ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ. ಗೃಹಬಂಧನದಲ್ಲಿದ್ದ ಒಸ್ಯಾವನಿಕೋವ ಕಳೆದ ವರ್ಷ ತನ್ನ ೧೧ ವರ್ಷದ ಪುತ್ರಿಯೊಂದಿಗೆ ದೇಶದಿಂದ ಪರಾರಿಯಾಗಿದ್ದರು. ಅವರ ಇನ್ಸ್ಟಾಗ್ರಾಮ್ ಪೇಜ್‌ನ ಪ್ರಕಾರ ಅವರು ಫ್ರಾನ್ಸ್‌ನಲ್ಲಿದ್ದಾರೆ ಎನ್ನಲಾಗಿದೆ. ಭಯ ಪಡದಿದ್ದಕ್ಕಾಗಿ ಮತ್ತು ಅವರ ಪರವಾಗಿ ಮಾತನಾಡಲು ನಿರಾಕರಿಸಿದ್ದಕ್ಕಾಗಿ ನನ್ನನ್ನು ಶಿಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಮತ್ತು ನನ್ನ ಕೃತ್ಯವನ್ನು ಈಗಲೂ ಸಮರ್ಥಿಸಿಕೊಳ್ಳುತ್ತಿದ್ದೇನೆ. ನನ್ನ ಮೇಲಿನ ಆಪಾದನೆ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಶಿಕ್ಷೆಯನ್ನು ಫ್ರಾನ್ಸ್ ಖಂಡಿಸಿದ್ದು ಅಧಿಕಾರವನ್ನು ಟೀಕಿಸುವ ಧ್ವನಿಗಳನ್ನು ನಿಗ್ರಹಿಸುವ ಕೆಲಸವನ್ನು ರಶ್ಯ ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದು ಫ್ರಾನ್ಸ್ನ ರಕ್ಷಣಾ ಸಚಿವೆ ಕ್ಯಾಥರಿನ್ ಕೊಲೊನಾ ಟೀಕಿಸಿದ್ದಾರೆ
