ಉದಯವಾಹಿನಿ, ಮಾಸ್ಕೋ: ಒಂದೆಡೆ ಉಕ್ರೇನ್ ವಿರುದ್ಧ ರಷ್ಯಾ ಅಬ್ಬರದ ದಾಳಿ ಮುಂದುವರೆಸುತ್ತಿದ್ದರೆ ಮತ್ತೊಂದೆಡೆ ಇದೀಗ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳೇ ಬೆಚ್ಚಿಬೀಳಿಸುವ ಸಂಗತಿ ಹೊರಗೆಡವಿದ್ದಾರೆ. ರಷ್ಯಾದ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆಯು ಯಶಸ್ವಿಯಾಗಿ ನಡೆದಿದೆ ಎಂದು ಇದೀಗ ಪುಟಿನ್ ಘೋಷಿಸಿದ್ದಾರೆ.
ನಾವು ಈಗ ಆಧುನಿಕ ರೀತಿಯ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಎಂದು ಪುಟಿನ್ ಗುರುವಾರ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು. ರಷ್ಯಾದ ಬ್ಯೂರೆವೆಸ್ಟ್ನಿಕ್ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಪರೀಕ್ಷೆಯು ಸನ್ನಿಹಿತವಾಗಿದೆ ಎಂದು ಕೆಲದಿನಗಳ ಹಿಂದೆ ಅಮೆರಿಕಾದ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿತ್ತು. ಆದರೆ ಬಳಿಕ ಈ ವರದಿಯನ್ನು ಪುಟಿನ್ ಅವರ ವಕ್ತಾರರೇ ತಳ್ಳಿಹಾಕಿದ್ದರು. ಆದರೆ ಇದೀಗ ಅಚ್ಚರಿಯ ರೀತಿಯ ಎಂಬಂತೆ ಸ್ವತಹ ಪುಟಿನ್ ಅವರೇ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ ಎಂದು ಘೋಷಿಸಿದ್ದಾರೆ. ಆದರೆ ಪುಟಿನ್ ಅವರ ಖಾತೆಯ ವಿವರಗಳ ವಿವರಗಳ ಬಗ್ಗೆ ಯಾವುದೇ ಖಚಿತತೆ ಹೊಂದಿಲ್ಲ.
