ಉದಯವಾಹಿನಿ, ಮಂಡ್ಯ: ನಾಡನ್ನು ಆವರಿಸಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ ದಸರಾದ ಮೂಲ ನೆಲೆಯಾದ ಪಾರಂಪರಿಕ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೋಮವಾರ ಸರಳವಾಗಿ ನಡೆದ ನಾಡಹಬ್ಬ ದಸರಾ ಉತ್ಸವವನ್ನು ಸಹಸ್ರಾರು ಜನರು ಸಾಕ್ಷೀಕರಿಸಿದರು.ಜಂಬೂ ಸವಾರಿಯು ದಸರಾದ ಗತವೈವ ಸಾರಿತು.ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
ದಸರಾ ಮಹೋತ್ಸವಕ್ಕೆ ಪಟ್ಟಣದ ಹೊರವಲಯದ ಕಿರಂಗೂರು ಸರ್ಕಲ್‍ನಲ್ಲಿನ ದಸರಾ ಮಂಟಪದಲ್ಲಿ ಶ್ರೀಚಾಮುಂಡೇಶ್ವರಿ ಮತ್ತು ಶಮೀವೃಕ್ಷ(ಬನ್ನಿಮರ)ಕ್ಕೆ ಸೋಮವಾರ ಕುಂಭ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ್ಯಕ್ರಮಗಳು ಆರಂಭಗೊಂಡವು.
ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ಶಮೀ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಪ್ರಧಾನ ಬಲಿ ನೀಡಿ ಪುಣ್ಯಾಹ,ಪಂಚಗವ್ಯ, ಗಣಪತಿ ಪೂಜೆಯೊಂದಿಗೆ ಮಂಟಪ ಪೂಜೆ ನೆರವೇರಿಸಿ ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮಹಾವಿಷ್ಣುವನ್ನು ಆವಾಹನೆ ಮಾಡಲಾಯಿತು.ನಂತರ ಬನ್ನಿ ಪೂಜೆ,ನಂದಿಕಂಬ ಪೂಜೆ ನಡೆಯಿತು.ಇಷ್ಟು ಪೂಜಾ ವಿಧಾನಗಳನ್ನು ವೇದಬ್ರಹ್ಮ ಡಾ.ಶ್ರೀಭಾನುಪ್ರಕಾಶ ಶರ್ಮಾ, ಶ್ರೀರಂಗಪಟ್ಟಣದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್.ಲಕ್ಷ್ಮೀಶ ನೇತೃತ್ವದ 10 ಮಂದಿ ವೈದಿಕರ ತಂಡ ನೆರವೇರಿಸಿತು.
ಬಳಿಕ ಮಂಟಪದಲ್ಲಿ ಇಡಲಾಗಿದ್ದ ಸಿಂಹದ ಮೇಲೆ ಆಸೀನಳಾಗಿರುವ ಶ್ರೀಚಾಮುಂಡೇಶ್ವರಿಯ ಮೂರ್ತಿಯಿದ್ದ ಅಂಬಾರಿ(ಮರದ ಔದ)ಯನ್ನು `ಮಹೇಂದ್ರ’ ಆನೆಯ ಬೆನ್ನ ಮೇಲೆ ಬೃಹತ್ ಜೆಸಿಬಿ ಯಂತ್ರದ ಸಹಾಯದಿಂದ ಇಡಲಾಯಿತು. ಅಕ್ರಂ ನೇತೃತ್ವದ 10 ಜನರ ತಂಡವು ಅಂಬಾರಿ ಕಟ್ಟುವ ಕಾರ್ಯವನ್ನು ನಿರ್ವಹಿಸಿತು.

Leave a Reply

Your email address will not be published. Required fields are marked *

error: Content is protected !!