ಉದಯವಾಹಿನಿ, ಮೈಸೂರು: ಮಹನೀಯರ ವೇಷಭೂಷಣ ತೊಟ್ಟು ಪುಟಾಣಿಗಳು ಗಾಂಭೀರ್ಯದಿಂದ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಜನಪದ ನೃತ್ಯ, ಗಾಯನ …ಹೀಗೆ ನಾನಾ ಕಲಾ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಮಕ್ಕಳ ದಸರಾಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರೆಯಿತು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸುಗಮ ಸಂಗೀತ ಕಾರ್ಯಕ್ರಮ ನಡೆಸಿದರು. 6 ರಿಂದ 7ನೇ ತರಗತಿ ಮತ್ತು 8-10ನೇ ತರಗತಿ ವಿಭಾಗದ ವಿಶೇಷ ಅಗತ್ಯತೆವುಗಳ್ಳ ಮಕ್ಕಳು ವೇಷಭೂಷಣ ಸ್ಪರ್ಧೆ ನಡೆಯಿತು. ಚಿಣ್ಣರು ವಿವೇಕಾನಂದ, ಚಾಮುಂಡಿ, ಕೋಲಾ ಮುಂತಾದ ವೇಷದಲ್ಲಿಕಂಗೊಳಿಸಿ ಮಕ್ಕಳ ದಸರೆಗೆ ಮೆರುಗು ತಂದರು.
ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ 9 ವಿಭಾಗಗಳ ಮಕ್ಕಳು ರಚಿಸಿದ ಪ್ರಾತ್ಯಕ್ಷಿಕೆಗಳ ವಸ್ತು ಪ್ರದರ್ಶನವೂ ವಿಶೇಷವಾಗಿತ್ತು. ಕರುನಾಡಿನ ಭೂಪಟದ ಮಾದರಿಯ ಮಧ್ಯದಲ್ಲಿ ನಿಂತು ಶಿಕ್ಷಕರು, ಮಕ್ಕಳ ದಸರಾ ನೋಡಲು ಬಂದವರು ಸೆಲ್ಪಿ ಕ್ಲಿಕ್ಕಿಸಿಕೊಂಡರು.
ಈ ಬಾರಿ ಯಶಸ್ವಿಯಾದ ಚಂದ್ರಯಾನದ ಮಾಹಿತಿಯನ್ನು ಮಕ್ಕಳು ಕುತೂಹಲದಿಂದಲೇ ಪಡೆದುಕೊಂಡು ಸಂಭ್ರಮಿಸಿದರು. ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಮೊಟ್ಟೆ ಸಹಿತ ಪೌಷ್ಠಿಕಾಂಶದ ಮಾಹಿತಿಯನ್ನು ನೀಡಲಾಯಿತು.
