ಉದಯವಾಹಿನಿ, ಜೆರುಸಲೇಂ : ಇಸ್ರೇಲ್ ಮಿಲಿಟರಿಯು ಗಾಜಾ ಮೇಲಿನ ವಾಯುದಾಳಿಯನ್ನು ಭಾನುವಾರ ಮುಂದುವರಿಸಿದೆ, ಲೆಬನಾನ್ ಮತ್ತು ಸಿರಿಯಾದಲ್ಲಿ ಇರುವ ಹಮಾಸ್ ಬೆಂಬಲಿಗರ ಮೇಲೆಯೂ ದಾಳಿ ನಡೆಸಿದೆ. ಇತ್ತ ಅಮೆರಿಕವು ಮಧ್ಯಪ್ರಾಚ್ಯದ ಕಡೆಗೆ ಇನ್ನಷ್ಟು ಹೆಚ್ಚು ಮಿಲಿಟರಿ ಉಪಕರಣಗಳನ್ನು ರವಾನಿಸಿದೆ.
24ಗಂಟೆಗಳ ಅವಧಿಯಲ್ಲಿ 266 ಪ್ಯಾಲೆಸ್ಟೀನ್ ನಾಗರಿಕರು (ಇವರಲ್ಲಿ 117 ಮಕ್ಕಳು) ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾನುವಾರ ಬೆಳಿಗ್ಗೆ ಇಸ್ರೇಲ್, ನೆರೆಯ ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಸಿರಿಯಾದ ಅಲೆಪ್ಪೊ ಹಾಗೂ ಡಮಾಸ್ಕಸ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ದಾಳಿ ಆಗಿದೆ.
ಇಸ್ರೇಲ್‌ಗೆ ಬೆಂಬಲವಾಗಿ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಇನ್ನಷ್ಟು ಮಿಲಿಟರಿ ಉಪಕರಣಗಳನ್ನು ರವಾನಿಸಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಇರಾನ್ ಹಾಗೂ ಅದರ ಬೆಂಬಲ ಹೊಂದಿರುವ ಕೆಲವು ಸಂಘಟನೆಗಳು ಸಂಘರ್ಷ ಹೆಚ್ಚಿಸುವ ಕೆಲಸವನ್ನು ಈಚೆಗೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕದ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುವ ಉದ್ದೇಶ ಕೂಡ ನಡೆಯ ಹಿಂದೆ ಇದೆ ಎಂದು ಆಸ್ಟಿನ್ ತಿಳಿಸಿದ್ದಾರೆ.
