ಉದಯವಾಹಿನಿ, ವಾಷಿಂಗ್ಟನ್ : ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವಂತೆಯೇ, ಪ್ಯಾಂಗಾಂಗ್ ಸರೋವರದ 2ನೇ ಸೇತುವೆ ಸಮೀಪ, ಡೋಕ್ಲಾನಲ್ಲಿ ಸೇನೆ ನಿಯೋಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಚೀನಾ ಮತ್ತಷ್ಟು ಚುರುಕುಗೊಳಿಸಿದೆ.
ಅಮೆರಿಕದ ರಕ್ಷಣಾ ಇಲಾಖೆಯು ಇಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾದ ಸೇನೆಯ ನಡುವೆ ಮೂರು ವರ್ಷದ ಹಿಂದೆ ಸಂಘರ್ಷ ಉಂಟಾದ ಬಳಿಕ ಉದ್ವಿಗ್ವ ಸ್ಥಿತಿ ಮೂಡಿದೆ.
ಅಮೆರಿಕ ಬಿಡುಗಡೆ ಮಾಡಿದ ‘ಚೀನಾದ ಸೇನೆ ಮತ್ತು ಭದ್ರತಾ ಪ್ರಗತಿ ವರದಿ-2023ರ ವರದಿಯಲ್ಲಿ, ‘ಭಾರತ ಮತ್ತು ಚೀನಾ ಗಡಿಯಲ್ಲಿ 2020ರಿಂದಲೂ ಉದ್ವಿಗ್ನ ಪರಿಸ್ಥಿತಿ ಇದೆ. ಅದರ ನಡುವೆಯೂ ಚೀನಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಮುಂದುವರಿಸಿದೆ’ ಎಂದು ಹೇಳಿದೆ.
ಚೀನಾವು ಅಭಿವೃದ್ಧಿ ಪಡಿಸುತ್ತಿರುವ ಮೂಲಸೌಕರ್ಯಗಳಲ್ಲಿ ಡೋಕ್ಲಾಮ್ ಬಳಿ ಭೂಮಿಯೊಳಗಿನ ದಾಸ್ತಾನು ಸೌಲಭ್ಯ, ವಾಸ್ತವ ಗಡಿ ರೇಖೆಯುದ್ದಕ್ಕೂ ಮೂರು ವಲಯದಲ್ಲಿ ಹೊಸದಾಗಿ ರಸ್ತೆಗಳ ಅಭಿವೃದ್ಧಿ, ನೆರೆಯ ಭೂತಾನ್‌ಗೆ ಹೊಂದಿಕೊಂಡಿರುವಂತೆ ವಿವಾದಿತ ಪ್ರದೇಶಗಳಲ್ಲಿ ಹೊಸ ಗ್ರಾಮಗಳ ಅಭಿವೃದ್ಧಿ, ಪ್ಯಾಂಗಾಂಗ್ ಸರೋವರಕ್ಕೆ ಎರಡನೇ ಸೇತುವೆ ನಿರ್ಮಾಣ ಕಾರ್ಯ, ಸೆಂಟರ್ ಸೆಕ್ಟರ್‌ನ ಬಳಿ ಬಹುಪಯೋಗಿ ವಿಮಾನನಿಲ್ದಾಣ ಹಾಗೂ ಹೆಲಿಪ್ಯಾಡ್‌ಗಳ ಅಭಿವೃದ್ಧಿ ಚಟುವಟಿಕೆಗಳು ಸೇರಿದೆ ಎಂದು ವಿವರಿಸಿದೆ.
