ಉದಯವಾಹಿನಿ, ಬೆಂಗಳೂರು: ಭಾರತದ ನೌಕಾಪಡೆಯ ೮ ಮಾಜಿ ಸಿಬ್ಬಂದಿಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದು ಆಘಾತಕಾರಿ ಸುದ್ದಿ. ಗಲ್ಲುಶಿಕ್ಷೆಗೆ ಗುರಿಯಾದ ನೌಕಾದಳದ ಸಿಬ್ಬಂದಿಗಳಕುಟುಂಬವಷ್ಟೇ ಅಲ್ಲ. ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ. ಕೇಂದ್ರ ಸರ್ಕಾರ ಗೌಪ್ಯತೆಯ ಸಬೂಬು ಹೇಳಿ ಕೈಚೆಲ್ಲಿ ಕುಳಿತರೆ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವೇ ಸ್ವತಃ ಕೈಯಾರೆ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಈ ಪ್ರಕರಣದ ಸೂಕ್ಷ್ಮತೆ ಅರಿತು ವರ್ತಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಭಾರತದ ನೌಕಾಪಡೆಯ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆ ಕುರಿತು ಕೇವಲ ಪ್ರಾಥಮಿಕ ಮಾಹಿತಿ ಇದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಕೇಂದ್ರ ಸರ್ಕಾರದ ರಾಜತಾಂತ್ರಿಕ ವೈಫಲ್ಯ ಅಲ್ಲವೆ ಎಂದು ಪ್ರಶ್ನಿಸಿರುವ ಅವರು, ಗಲ್ಲು ಶಿಕ್ಷೆಗೆ ಒಳಗಾದ ನೌಕಾಪಡೆಯ ಸಿಬ್ಬಂದಿಗಳು ಕಳೆದ ಒಂದು ವರ್ಷದಿಂದ ಕತಾರ್ ಜೈಲಿನಲ್ಲಿದ್ದರು. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
