ಉದಯವಾಹಿನಿ, ಬೆಂಗಳೂರು: ನಗರದ ಹೊರವಲಯದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಸುತ್ತಮುತ್ತಲ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಸೆರೆಸಿಕ್ಕ ಚಿರತೆಯನ್ನು ಅರಣ್ಯಾಧಿಕಾರಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಿದ್ದಾರೆ. ಇಂದು ಮುಂಜಾನೆಯಿಂದಲೇ ಈ ಚಿರತೆಯ ಸೆರೆಗಾಗಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಅರವಳಿಕೆ ಚುಚ್ಚುಮದ್ದು ನೀಡಲು ಪಶು ವೈದ್ಯಾಧಿಕಾರಿ ಮುಂದಾಗುತ್ತಿದ್ದಂತೆ ಚಿರತೆ ಇವರ ಮೇಲೆ ದಾಳಿ ಮಾಡಿದೆ. ಇವರ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದಾದ ಕೆಲವೇ ನಿಮಿಷಗಳ ನಂತರ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಪ್ರೇ ಮಾಡಲು ಮುಂದಾದಾಗ ಅವರ ಮೇಲೂ ಚಿರತೆ ದಾಳಿ ಮಾಡಿದ್ದು, ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ಶನಿವಾರ ಬೊಮ್ಮನಹಳ್ಳಿಯ ಕೂಡ್ಲುಗೇಟ್ ಸಮೀಪದ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದ ಪಾಳು ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿದ್ದ ಸ್ಥಳೀಯ ಜನತೆ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
