ಉದಯವಾಹಿನಿ, ಬೆಂಗಳೂರು: ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಮನೆ ಕಳ್ಳತನ ಪ್ರಕರಣಗಳ ಆರೋಪಿ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಲಾಸಿ ಜೀವನ ಕ್ಯಾಸಿನೋ ಚಟಕ್ಕಾಗಿ ಮನೆಗಳ್ಳತನದಲ್ಲಿ ಭಾಗಿಯಾಗುತ್ತಿದ್ದ ಆರೋಪಿ, ಕಳವು ಮಾಡಿದ ವಸ್ತುಗಳನ್ನು ಅಡವಿಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ.
ತನ್ನ 16 ವಯಸ್ಸಿನಲ್ಲೇ ಮನೆಗಳ್ಳತನ ಆರಂಭಿಸಿದ್ದ ಕಾರ್ತಿಕ್ ಹೆಣ್ಣೂರು ನಿವಾಸಿ. ಮದುವೆಯಾಗಿರುವ ಕಾರ್ತಿಕ್ಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದುವರೆಗೂ ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯ ಎಸಗಿರುವ ಆರೋಪಿಯ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಹೆಣ್ಣೂರು, ಕೊತ್ತನೂರು ಮಾತ್ರವಲ್ಲದೇ ಮೈಸೂರು, ಹಾಸನದಲ್ಲಿಯೂ ಪ್ರಕರಣಗಳಿವೆ. ಬೆಂಗಳೂರು ಪೊಲೀಸರಿಂದಲೇ ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಬಂಧನವಾಗಿದ್ದಾನೆ.ಬೆಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, 2008 ಹಾಗೂ 2010ರಲ್ಲಿ ಪೊಲೀಸರ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದರಿಂದ ಎಸ್ಕೇಪ್ ಕಾರ್ತಿಕ್ ಎಂದೇ ಕುಖ್ಯಾತಿ ಹೊಂದಿದ್ದಾನೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣೂರು ಠಾಣಾ ಪೊಲೀಸರು ಕಾರ್ತಿಕ್ನನ್ನು ಬಂಧಿಸಿದ್ದರು. ಸದ್ಯ ಪ್ರಕರಣವೊಂದರ ಸಂಬಂಧ ಗೋವಾಗೆ ತೆರಳಿದ್ದ ಗೋವಿಂದರಾಜನಗರ ಠಾಣಾ ಪೊಲೀಸರು ಎಸ್ಕೇಪ್ ಕಾರ್ತಿಕ್ನನ್ನು ಬಂಧಿಸಿದ್ದಾರೆ.
