ಉದಯವಾಹಿನಿ,ಬೆಂಗಳೂರು: ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಾಲ್ಕು ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಸ್ವಾಲಂಬಿಯಾಗಿ ರೂಪಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಆರ್.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಸಮಿತಿ ಹಲವು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಆಗಿನ ಮುಖ್ಯಮಂತ್ರಿಯವರಿಗೂ ನೀಡಿದೆ. ತಾವು ಸಚಿವರಾದ ಮೇಲೆ ತಮಗೂ ತಲುಪಿಸಿದೆ ಎಂದು ಹೇಳಿದರು.
ಸಮಿತಿಯ ಶಿಫಾರಸ್ಸಿನಲ್ಲಿ ಪ್ರಮುಖವಾಗಿ ಪ್ರಯಾಣ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಸಮಿತಿ ಮಾದರಿಯಲ್ಲಿ ಪ್ರತ್ಯೇಕವಾದ ಸ್ವಾಯತ್ತ ಸಮಿತಿ ರಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. 2015ರಲ್ಲಿ ದರ ಪರಿಷ್ಕರಣೆಯಾಗಿತ್ತು. ಆ ವೇಳೆ ಡೀಸೆಲ್ ಬೆಲೆ 50ರಿಂದ 60 ರೂ.ನಷ್ಟಿತ್ತು. ಈಗ ತೀವ್ರವಾಗಿ ಏರಿಕೆಯಾಗಿದೆ. ಸಾರಿಗೆ ಸಿಬ್ಬಂದಿಗಳ ವೇತನ 2017 ಮತ್ತು 2022ರಲ್ಲಿ ಪರಿಷ್ಕರಣೆಯಾಗಿದೆ.ಬಿಡಿಭಾಗಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೂ ಯಾವುದೇ ಸರ್ಕಾರಗಳು ಬಸ್ ಪ್ರಯಾಣ ದರ ಪರಿಷ್ಕರಣೆಗೆ ಅನುಮತಿ ನೀಡುತ್ತಿಲ್ಲ. ಹೀಗೇ ಆದರೆ ಸಾರಿಗೆ ನಿಗಮಗಳು ಶಾಶ್ವತವಾಗಿ ನಷ್ಟದಲ್ಲಿರಬೇಕಾಗುತ್ತದೆ. ಆ ಕಾರಣಕ್ಕೆ ದರ ಪರಿಷ್ಕರಣೆಗೆ ಸ್ವಾಯತ್ತವಾಗಿ ನಿರ್ಣಯ ಕೈಗೊಳ್ಳುವ ಸಮಿತಿ ರಚಿಸುವಂತೆ ಶ್ರೀನಿವಾಸ್‍ಮೂರ್ತಿಯವರು ಶಿಫಾರಸ್ಸು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!