ಉದಯವಾಹಿನಿ, ಬೆಂಗಳೂರು: 6- ನಾವು ಹಮ್ಮಿಕೊಳ್ಳಲಿರುವ ರೈತ ಸಾಂತ್ವನ ಯಾತ್ರೆ ಬಗ್ಗೆ ಲಘುವಾಗಿ ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ ಎಂದು ಕಾಲೆಳೆದಿದ್ದಾರೆ.
ಅಲ್ಲದೆ, ವಿಶ್ವ ವಿಖ್ಯಾತ ವಿತ್ತತಜ್ಞ ಎಂದು ಹಾಲಿ ಸಿಎಂಗೆ ಮಾಜಿ ಮುಖ್ಯಮಂತ್ರಿ ಟಾಂಗ್ ನೀಡಿದ್ದಾರೆ. ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿ. ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ದೊಡ್ಡ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ ಎಂದು ವ್ಯಂಗ್ಯವಾಡಿದ್ದಾರೆ. ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ, ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ಗಂಭೀರ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರ್ಕಾರ ದ ಅಪರಿಮಿತ ಅಸಡ್ಡೆಯನ್ನು ಅರಿಯದಷ್ಟು ಮುಗ್ಧನೇ ನಾನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
