ಉದಯವಾಹಿನಿ, ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗುಣಮಟ್ಟ ಮಿತಿ ಮೀರಿದ್ದರೆ ರಾಜ್ಯ ರಾಜಧಾನಿ ಬೆಂಗಳೂರು ವಾಯು ಮಾಲಿನ್ಯ ವಿಚಾರದಲ್ಲಿ ಸೇಫ್ ಸಿಟಿಯಾಗಿದೆ.
ಮೆಜೆಸ್ಟಿಕ್, ಸಿಲ್ಕ್ ಬೋರ್ಡ್ ಹೊರತುಪಡಿಸಿದಲ್ಲಿ ಇತರ ಬಹುತೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮವಾಗಿದ್ದು, ಉಸಿರಾಡಲು ಯೋಗ್ಯವಾದ ಗುಣಮಟ್ಟ ಕಾಯ್ದುಕೊಂಡಿದೆ. 50 ರಿಂದ 78 ರವರೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಎಕ್ಯೂಐ ದಾಖಲಾಗಿದೆ.ನೆರೆಹೊರೆ ರಾಜ್ಯಗಳ ರಾಜಧಾನಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಈ ಬಾರಿ ಕಡಿಮೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನ ಆರಂಭಕ್ಕೆ ಅನ್ವಯವಾಗುವಂತೆ ತೆಗೆದುಕೊಂಡಲ್ಲಿ ಶೇ.50 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯದಲ್ಲಿ ಕಡಿಮೆ ಅಂಕಿ ಸಂಖ್ಯೆಗಳು ದಾಖಲಾಗಿವೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ವೆಬ್ ಸೈಟ್ನಲ್ಲಿ ಸೂಚ್ಯಂಕದ ವಿವರಗಳನ್ನು ನಮೂದಿಸಿದ್ದು, ಇದರಲ್ಲಿ ಈ ಬಾರಿಯ ನವೆಂಬರ್ನಲ್ಲಿ ಕಡಿಮೆ ಮಾಲಿನ್ಯ ದಾಖಲಾಗಿರುವುದು ದೃಢವಾಗಿದೆ. ವಾಯು ಗುಣಮಟ್ಟ ಸೂಚ್ಯಂಕ ಯೋಗ್ಯ ಪ್ರಮಾಣದ ಗೆರೆಯನ್ನು ಕಾಯ್ದುಕೊಂಡಿದೆ.
