ಉದಯವಾಹಿನಿ,ದೇವರಹಿಪ್ಪರಗಿ:ಸಕಲ ಜೀವರಾಶಿಗಳಿಗೆ ಜೀವನಾಧಾರವಾದ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ, ನೀರಿನ ಮಿತ ಬಳಕೆ ಇಂದಿನ ಅಗತ್ಯವಾಗಿದ್ದು ಕುಡಿಯುವ ನೀರಿನ ವ್ಯರ್ಥ ಪೋಲಾಗದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ಪ. ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಹೇಳಿದರು.
ಪಟ್ಟಣದಲ್ಲಿ ಗುರುವಾರದಂದು ಪ.ಪಂ ಆವರಣದಲ್ಲಿ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಎಂಬ ಜಲಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದ ಅಮೃತ್ ಯೋಜನೆಯಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪ.ಪಂ ವ್ಯಾಪ್ತಿಯ ವಿವಿಧ ಸ್ವಸಹಾಯ ಗುಂಪಿನ 30 ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಪಟ್ಟಣಕ್ಕೆ ನೀರು ಪೂರೈಕೆ ದೇವರಹಿಪ್ಪರಗಿ ಹಾಗೂ ಹರನಾಳ ಗ್ರಾಮದ ಬಳಿಯ ಜಾಕ್‌ವೆಲ್‌ನಲ್ಲಿ ಕಚ್ಚಾ ನೀರು ಎತ್ತುವುದು, ಅಲ್ಲಿಂದ ಸಂಸ್ಕರಣಾ ಘಟಕಕ್ಕೆ ಕರೆತಂದು ನೀರನ್ನು ಶುದ್ಧೀಕರಿಸುವ ಎಲ್ಲ ಪ್ರಕ್ರಿಯೆಗಳನ್ನು ಪ್ರಾಯೋಗಿಕವಾಗಿ ತೋರಿಸಿ ನಂತರ ನೀರಿನ ಮಹತ್ವ, ಅದರ ಉಳಿವಿನ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೌಶಲಾಭಿವೃದ್ಧಿ ಇಲಾಖೆಯ ಶ್ರೀಧರ್ ಮುಳ್ಳಾಳ ಅವರು ಮಾತನಾಡಿ, ನೀರು ಅಮೂಲ್ಯವಾಗಿದೆ. ಅದನ್ನು ಮಿತವಾಗಿ ಬಳಸಬೇಕು, ಮಹಿಳೆಯರು ನೀರಿನ ಬಳಕೆ ಹೆಚ್ಚು ಮಾಡುವುದರಿಂದ ಅದರ ಮಹತ್ವವನ್ನು ಪ್ರಾಯೋಗಿಕವಾಗಿ ತೋರಿಸುವ ಕಾರ್ಯಕ್ರಮ ಇದಾಗಿದೆ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಅಲ್ಲದೆ ನೀರಿನ ಕಂದಾಯವನ್ನು ನಿಗದಿತ ಸಮಯದೊಳಗೆ ಪಾವತಿಸಿ ಪಂಚಾಯಿತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತಾವಿಕವಾಗಿ ಪಟ್ಟಣ ಪಂಚಾಯಿತಿಯ ಸಂಪನ್ಮೂಲ ವ್ಯಕ್ತಿ ಸೋಮು ಬೋವಿ ಮಾತನಾಡಿ, ಭೂಮಿ ಮೇಲಿರುವ ನೀರಿನಲ್ಲಿ ಶೇ.97ರಷ್ಟು ನೀರು ಸಮುದ್ರದಲ್ಲಿದೆ. ಶೇ.2ರಷ್ಟು ನೀರು ಹಿಮದ ರೂಪದಲ್ಲಿದೆ. ನಾವು ನಿತ್ಯ ಬಳಸುವ ನೀರು ಶೇ.1 ರಷ್ಟು ಮಾತ್ರ ಇದೆ. ಹಾಗಾಗಿ ಇದನ್ನು ಒಂದು ಸಂಪನ್ಮೂಲ ಎಂದು ಎಲ್ಲರೂ ಅರಿಯಬೇಕು. ಇದು ಮುಗಿದರೆ ಇಡೀ ಜೀವಕೋಟಿ ಅಂತ್ಯವಾಗಲಿದೆ. ಪ್ರತಿ ಹನಿ ನೀರು ಅಮೂಲ್ಯವಾಗಿದೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ನದಿ ಸೇರಿದಂತೆ ಹಲವು ಜನಮೂಲಗಳು ಇಂದು ಮಲಿನವಾಗುತ್ತಿವೆ ಎಂದರು.ನಂತರ ನೀರು ಶುದ್ದೀಕರಣ ಘಟಕದಲ್ಲಿ ಜಲ ದೀಪಾವಳಿ ಆಚರಿಸಿದರು.
ಇದೇ ಸಂದರ್ಭದಲ್ಲಿ ಪ.ಪಂ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಸೇರಿದಂತೆ  ಪಟ್ಟಣದ ಸ್ವಸಹಾಯ ಸಂಘದ ಸದಸ್ಯರು, ಪ.ಪಂ ಹಾಗೂ ಸಂಸ್ಕರಣ ಘಟಕದಲ್ಲಿರುವ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!