ಉದಯವಾಹಿನಿ, ಕೋಲಾರ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೇರಳದ ಕಾಸರಗೋಡು ಇದರ ಗಡಿನಾಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಾನಪದ ಕಲಾವಿದ ಗೋ.ನಾ.ಸ್ವಾಮಿರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾಲೂರು ತಾಲೂಕಿನ ಯಲುವಗುಳಿಯಲ್ಲಿ ಹುಟ್ಟಿದ ಇವರು ಕೋಲಾರದ ಸುಗಟೂರು ಗ್ರಾಮದಲ್ಲಿ ಬೆಳೆದು ರಾಜ್ಯದಾದ್ಯಂತ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿಗಾಡಿನ ಜಾನಪದ ಹಾಡುಗಾರಿಕೆಯ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರು ಇಂಗ್ಲೆಂಡ್, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಸುಮಾರು ೬೨ ದೇಶಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕೂಡ ತೆರಳಲಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ ಬೆಂಗಳೂರು ನಾಡಪ್ರಭು ಕೆಂಪೇಗೌಡ, ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪರಿಸರ ಇಲಾಖೆಯ ವನಮಿತ್ರ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮೂಲಕ ನೂರಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದಲ್ಲಿ ಸುಮಾರು ೧೮ ವರ್ಷದಿಂದ ತನ್ನ ಸ್ವಂತ ಖರ್ಚಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಇಂತಹವರಿಗೆ ಕೇರಳ ರಾಜ್ಯದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುತ್ತದೆ.
ಕ್ರೀಡಾ ಇಲಾಖೆಯಲ್ಲಿ ಸಣ್ಣ ಸಾಧನೆಗೆ ಗೌರವಿಸುವ ಸರ್ಕಾರಗಳು ಹಳ್ಳಿಗಾಡಿನ ಕೂಲಿಕಾರ್ಮಿಕನಾಗಿ ಬೆಳೆದಿರುವ ಇಂತಹ ಜಾನಪದ ಕಲಾವಿದ ಗೋ.ನಾ ಸ್ವಾಮಿಗೆ ಮತ್ತಷ್ಟು ಪ್ರಶಸ್ತಿಗಳನ್ನು ನೀಡುವ ಮೂಲಕ ಹಳ್ಳಿಯ ನೈಜ ಪ್ರತಿಭೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಗುರುತಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!