ಉದಯವಾಹಿನಿ, ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ ಬಿಟ್ಟು ಬಿಟ್ಟು ಸುರಿದ ಮಳೆಗೆ ನಾಗರಿಕರು ಪರದಾಡುವಂತಾಯಿತು.
ಬೆಳಗ್ಗೆಯಿಂದಲೇ ಬೆಂಗಳೂರಿನ ಭಾಗಶಃ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡಿತು. ಈ ನಡುವೆ ಬೆಳಿಗ್ಗೆಯಿಂದ ಸಂಜೆವರೆಗೂ ಆಗಾಗ ತುಂತುರು ಮಳೆಯಾಯಿತು. ಈ ವೇಳೆ ದ್ವಿಚಕ್ರ ಸವಾರರು ಮಳೆಯ ಹನಿಗಳಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ, ಬೃಹತ್ ಕಟ್ಟಡ ಹಾಗೂ ಕೆಳಸೇತುವೆಗಳ ಆಶ್ರಯ ಪಡೆದ ದೃಶ್ಯ ಸಾಮಾನ್ಯವಾಗಿತ್ತು.
ಇನ್ನೂ, ಈ ಕುರಿತು ಹವಮಾನ ಇಲಾಖೆ ಮಾಹಿತಿ ನೀಡಿದ್ದು, ಮುಂದಿನ ೨೪ ಗಂಟೆ ಅವಧಿಯಲ್ಲಿ ಅಂದರೆ ಸೋಮವಾರ ಬೆಳಗ್ಗೆ ೮.೩೦ರಿಂದ ಮಂಗಳವಾರ ಬೆಳಗ್ಗೆ ೮.೩೦ರ ತನಕದ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ಕೆಲವು ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗೆ ಚದುರಿದ ಮಳೆಯಾಗಲಿದೆ. ಹಗಲು ಹೊತ್ತಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದಿದೆ.
ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜು ಕವಿದ ವಾತಾವರಣ ಇರಲಿದೆ. ವಾತಾವರಣದ ಕನಿಷ್ಠ ತಾಪಮಾನ ೧೭ ಡಿಗ್ರಿ ಸೆಲ್ಶಿಯಸ್ ಮತ್ತು ಗರಿ ತಾಪಮಾನ ೨೯ ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ ಎಂದು ಬೆಂಗಳೂರ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.
ಇನ್ನುಳಿದ ಹಾಗೆ, ಹವಾಮಾನ ಇಲಾಖೆಯ ಪ್ರಕಾರ ದಕ್ಷಿಣ ಒಳಾನಾಡಿನಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿ,ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಕಡೆ ಸಾಧಾರಣದಿಂದ ಭಾರಿ ಮಳೆಯಾಗಬಹುದು. ಬಳ್ಳಾರಿ, ಚಿತ್ರದರ‍್ಗ, ದಾವಣಗೆರೆ, ವಿಜಯನಗರಗಳಲ್ಲಿ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ.

Leave a Reply

Your email address will not be published. Required fields are marked *

error: Content is protected !!