
ಉದಯವಾಹಿನಿ, ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಅವರ ವಿಶೇಷ ಕಾಳಜಿಯಿಂದಾಗಿ ಜಿಲ್ಲೆಯ ನೂರಾರು ಸ್ಮಾರಕಗಳಿಗೆ ಕಾಯಕಲ್ಪದ ಕಾಲ ಬಂದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ 300ಕ್ಕೂ ಹೆಚ್ಚು ಸ್ಮಾರಕಗಳ ಅಭಿವೃದ್ಧಿಯನ್ನು ನರೇಗಾ ಕ್ರಿಯಾ ಯೋಜನೆಗೆ ಸೇರಿಸಿದ್ದು ಹೊಸ ಮಾದರಿ ಸೃಷ್ಟಿಸಿದ್ದಾರೆ.
ಶತಶತಮಾನದಿಂದಲೂ ಇತಿಹಾಸದ ಕುರುಹನ್ನು ಕೂಗಿ ಹೇಳುತ್ತಿರುವ ಶಾಸನ, ಪ್ರಾಚೀನ ದೇವಾಲಯ, ಮಂಟಪ, ವೀರಗಲ್ಲು, ಮಹಾಸತಿಗಲ್ಲು, ಕಲ್ಯಾಣಿ, ಕೊಳ, ಶಿವಲಿಂಗ, ನಾಗರಕಲ್ಲುಗಳು ಜಿಲ್ಲೆಯಾದ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸ್ಮಾರಕಗಳು ದನದ ಕೊಟ್ಟಿಗೆಗಳಾಗಿವೆ. ಜಿಲ್ಲೆಯ ಸಿಇಒ ಆಗಿ ಬರುತ್ತಿದ್ದಂತೆ ಶೇಖ್ ತನ್ವೀರ್ ಆಸೀಫ್ ಅವರು ಎಲ್ಲೆಂದರಲ್ಲಿ ಸ್ಮಾಕರಗಳು ಬಿದ್ದಿರುವುದನ್ನು ಗುರುತಿಸಿದರು.
ಸ್ಮಾರಕಗಳ ರಕ್ಷಣೆಗೆ, ಸ್ವಚ್ಛತೆಗೆ, ಕಾಯಕಲ್ಪಕ್ಕೆ ಯೋಜನೆಯೊಂದನ್ನು ರೂಪಿಸಬೇಕೆಂದು ಅವರು ಯತ್ನಿಸಿದಾಗ ‘ವಿಶ್ವ ಪರಂಪರೆ ಸಪ್ತಾಹ’ ನೆರವಾಯಿತು. ಈ ಸಪ್ತಾಹವನ್ನು ಬಳಸಿಕೊಂಡು ಸ್ಮಾರಕಗಳ ರಕ್ಷಣೆಗೆ ಯೋಜನೆಯೊಂದನ್ನು ರೂಪಿಸಿದರು. ನ.15ರಿಂದ ನ.25ರವರೆಗೆ ಏಳು ದಿನಗಳ ಕಾಲ ಜಿಲ್ಲೆಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಳು ಸುರಿಯುತ್ತಿರುವ ಸ್ಮಾರಕಗಳನ್ನು ಗುರುತಿಸುವ ಕಾರ್ಯಾಚರಣೆಯನ್ನು ಆಯಾ ಗ್ರಾಪಂ ಪಿಡಿಒಗಳಿಗೆ ಕೆಲಸ ವಹಿಸಿದರು.
.
