ಉದಯವಾಹಿನಿ, ಬೀದರ : ಸಾರ್ವತ್ರಿಕ ಲೋಕಸಭಾ ಚುನಾವಣೆ ನೀತಿ ಸಂಹಿತಿ ಪ್ರಯುಕ್ತ ಬೀದರ ಜಿಲ್ಲೆಯಲ್ಲಿ ಮಾ.1 ರಿಂದ 31 ರವರೆಗೆ ಜಿಲ್ಲೆಯ ವಿವಿಧ ವಲಯ,ತಾಲ್ಲೂಕು ವ್ಯಾಪ್ತಿಗಳಲ್ಲಿ ಅಬಕಾರಿ ಇಲಾಖೆಯಿಂದ 210 ದಾಳಿಗಳನ್ನು ಕೈಗೊಂಡು 133 ಮೊಕದ್ದಮೆಗಳನ್ನು ದಾಖಲಿಸಿ,ಅಂದಾಜು 36,83,401 ರೂ ಮೌಲ್ಯದ ಅಬಕಾರಿ ವಸ್ತುಗಳು ಜಪ್ತು ಮಾಡಲಾಗಿದೆ.
108 ಆರೋಪಿಗಳನ್ನು ಬಂಧಿಸಿ ಒಟ್ಟು 827.160 ಲೀ. ಮದ್ಯ, 258.590 ಲೀ. ಬೀರ್ ಮತ್ತು 197 ಲೀ. ಸೇಂದಿ, 4.030 ಕಿ.ಗ್ರಾಂ ಗಾಂಜಾ ಹಾಗೂ 23 ದ್ವಿ ಚಕ್ರ ವಾಹನ, 2 ನಾಲ್ಕು ಚಕ್ರದ ವಾಹನಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.
ಅಬಕಾರಿ ಡೆಪ್ಯುಟಿ ಕಮೀಷನರ್ ಡಾ. ಸಂಗನಗೌಡ ಪಿ. ಹೊಸಳ್ಳಿ ಮಾರ್ಗದರ್ಶನದಲ್ಲಿ ಅಬಕಾರಿ ಕಾರ್ಯನಿರ್ವಾಹಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿಗಳನ್ನು ಸಜ್ಜುಗೊಳಿಸಿದ್ದು,ದಿನದ 24 ಗಂಟೆ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಅಬಕಾರಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದು,
ಇದನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ ಕಳ್ಳಭಟ್ಟಿ ಸಾರಾಯಿ ಹಾಗೂ ಅಕ್ರಮ ಮದ್ಯ ತಯಾರಿಕೆ, ಸಾಗಾಣಿಕೆ ಮತ್ತು ಮಾರಾಟ, ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುವ ಸಾಧ್ಯತೆಗಳು ಇದ್ದು ಇವುಗಳನ್ನು ನಿಯಂತ್ರಿಸಲು ಸಾರ್ವಜನಿಕರು ಮಾಹಿತಿ ನೀಡುವ ಸಲುವಾಗಿ ಈ ಕಛೇರಿಯಲ್ಲಿ ಅಬಕಾರಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ: 1800 4251 055 ಯನ್ನು ಸಂಪರ್ಕಿಸಲು ಬೀದರ ಜಿಲ್ಲೆ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಡಾ. ಸಂಗನಗೌಡ ಪಿ. ಹೊಸಳ್ಳಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!