ಉದಯವಾಹಿನಿ, ಉಡುಪಿ: ಭತ್ತದ ಕೃಷಿ ಮಾಡಿ, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ಅತಿಯಾದ ಮಳೆ ಮತ್ತು ನೆರೆ ಬರೆ ಎಳೆದಿದೆ. ತಳಿಯ ಭತ್ತದ ಬಿತ್ತನೆ ಬೀಜದ ಅಲಭ್ಯತೆ, ಬಿತ್ತನೆ ಬೀಜದ ದರ ಏರಿಕೆಯ ಬಿಸಿಯಿಂದ ಈ ಬಾರಿ ಮಳೆಗಾಲದ ಆರಂಭದಲ್ಲೇ ಹೈರಾಣಾಗಿದ್ದ, ಕೃಷಿಕನಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
ಭತ್ತದ ಬೆಳೆಯು ಜಿಲ್ಲೆಯಲ್ಲಿ ಪ್ರಧಾನ ಬೆಳೆಯಾಗಿದ್ದು, ಕಾರ್ಮಿಕರ ಕೊರತೆ, ಯಂತ್ರಗಳ ದುಬಾರಿ ಬಾಡಿಗೆಯಿಂದ ಬೇಸತ್ತು ಕೃಷಿಯಿಂದ ವಿಮುಖರಾಗುತ್ತಿರುವ ರೈತರ ಸಂಖ್ಯೆಯೇ ಹೆಚ್ಚಿದೆ. ಈ ನಡುವೆ ಕೃಷಿ ಮಾಡಿಯೂ ಪ್ರಾಕೃತಿಕ ವಿಕೋಪದಿಂದಾಗಿ ಫಸಲು ಕೈಗೆ ಬಾರದ ಸ್ಥಿತಿಯಲ್ಲಿ ಹಲವು ರೈತರಿದ್ದಾರೆ.
ಜುಲೈ ತಿಂಗಳಿನಲ್ಲಿ ಮಳೆ ನಿರಂತರವಾಗಿ ಸುರಿದ ಪರಿಣಾಮವಾಗಿ ಪದೇ ಪದೇ ನೆರೆ ಬಂದು ಭತ್ತದ ಸಸಿಗಳು ಹಲವು ದಿನಗಳ ಕಾಲ ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಕೊಳೆತು ಹೋಗಿವೆ.
ಇನ್ನು ಕೆಲವೆಡೆ ನೆರೆ ನೀರಿನ ಜೊತೆ ತೋಡಿನ ಹೂಳು ಗದ್ದೆಗಳಿಗೆ ನುಗ್ಗಿ, ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚು ಭತ್ತದ ಕೃಷಿ ನಾಶವಾಗಿದೆ. ನಂತರದ ಸ್ಥಾನದಲ್ಲಿ ಬೈಂದೂರು ತಾಲ್ಲೂಕಿದೆ. ಈ ಪ್ರದೇಶಗಳಲ್ಲಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ.
ನಾಟಿ ಮಾಡಿ ಒಂದೂವರೆ ತಿಂಗಳೊಳಗೆ ಎರಡು ಬಾರಿ ನೆರೆ ಬಂದಿದ್ದು, ಒಮ್ಮೆ ಬಂದ ನೆರೆ ಏಳೆಂಟು ದಿನಗಳ ಕಾಲ ಇಳಿಕೆಯಾಗದ ಕಾರಣ ಬೆಳೆ ನಾಶವಾಗಿದೆ. ಕೆಲವು ರೈತರು ಭತ್ತದ ಬೆಳೆ ನಾಶವಾದ ಗದ್ದೆಗಳನ್ನು ಮತ್ತೆ ಹದಗೊಳಿಸಿ, ಸಸಿ ನಾಟಿ ಮಾಡಿದ್ದಾರೆ. ಅದರಿಂದಲೂ ಉತ್ತಮ ಫಸಲು ಬರುವ ನಿರೀಕ್ಷೆ ಇಲ್ಲ ಎನ್ನುತ್ತಾರೆ ಬ್ರಹ್ಮಾವರ ವ್ಯಾಪ್ತಿಯ ನೀಲಾವರದ ಮಧ್ಯಸ್ಥರಬೆಟ್ಟು ಪ್ರದೇಶದ ರೈತರು.
ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಕೃಷಿಯಲ್ಲಿ ಉಳುಮೆ, ನಾಟಿಗೆ ಯಂತ್ರಗಳನ್ನೇ ಆಶ್ರಯಿಸಬೇಕಾಗಿದೆ. ಭದ್ರಾವತಿ ಮೊದಲಾದೆಡೆಗಳಿಂದ ಬರುವ ಯಂತ್ರಗಳ ಬಾಡಿಗೆಯೂ ದುಬಾರಿ. ಇಷ್ಟೆಲ್ಲಾ ಖರ್ಚು ಮಾಡಿದರೂ ನೆರೆಯಿಂದಾಗಿ ಬೆಳೆ ಹಾನಿಯಾಗಿದೆ.
