ಉದಯವಾಹಿನಿ,ಬೆಂಗಳೂರು: ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅಮಾನುಷ ಹಲ್ಲೆ ಮಾಡಿ ಅತ್ಯಾಚಾರ ನಡೆಸಿ ಕೊಲೆ ಮಾಡಿ ನಾಗರಿಕ ಸಮಾಜ ತಲೆ ತಗ್ಗಿಸುವ ಘೋರ ಕೃತ್ಯ ಬೆನ್ನಲ್ಲೇ ನಿನ್ನೆ ಮಧ್ಯರಾತ್ರಿ ಬೆಂಗಳೂರಿನಲ್ಲಿ ಆಟೋ ಹತ್ತಿದ ಪದವಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಯತ್ನ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.
ಗ್ಯಾಂಗ್ ರೇಪ್ ಯತ್ನಕ್ಕೆ ಒಳಗಾಗಿ ಅರೆಬೆತ್ತಲಾದ ೨೦ ವರ್ಷದ ಪದವಿ ವಿದ್ಯಾರ್ಥಿನಿಯನ್ನು ಕಾರಿನ ಟಾರ್ಪಲ್‌ನಿಂದ ಮುಚ್ಚಿಕೊಂಡು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಘಾತಕ್ಕೊಳಗಾಗಿರುವ ಆಕೆಯಿಂದ ಪ್ರಾಥಮಿಕ ಮಾಹಿತಿ ಪಡೆದಿರುವ ಪೊಲೀಸರು ದೌರ್ಜನ್ಯ ಯತ್ನ ನಡೆಸಿದ ಕಾಮುಕರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ರಾತ್ರಿ ಸ್ನೇಹಿತರೊಂದಿಗೆ ಕೋರಮಂಗಲದ ಪಬ್‌ವೊಂದಕ್ಕೆ ಪಾರ್ಟಿಗೆ ತೆರಳಿದ್ದಳು.ಅಲ್ಲಿಂದ ಮಧ್ಯರಾತ್ರಿ ಪಾರ್ಟಿ ಮುಗಿಸಿ ಸ್ನೇಹಿತರೊಂದಿಗೆ ವಾಪಸ್ ಹೋಗುವಾಗ ಮಾರ್ಗಮಧ್ಯೆ ಸ್ನೇಹಿತನ ಕಾರು, ಆಟೋಗೆ ಟಚ್ ಆಗಿದ್ದರಿಂದ ಆಟೋ ಚಾಲಕರು ಗಲಾಟೆ ಮಾಡಿದ್ದಾರೆ.
ಸ್ಥಳಕ್ಕೆ ಹೊಯ್ಸಳ ಕೂಡ ಬಂದಿತ್ತು.ಅಷ್ಟರಲ್ಲಿ ಬೈಕ್ ಒಂದರಲ್ಲಿ ಡ್ರಾಪ್ ತೆಗೆದುಕೊಂಡು ಅಲ್ಲಿಂದ ಯುವತಿ ಹೊರಟಿದ್ದಳು. ಮಾರ್ಗ ಮಧ್ಯೆ ಇಳಿದು ಮತ್ತೊಂದು ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದಾಳೆ.
ಅಲ್ಲಿಂದ ಆಟೋದಲ್ಲಿ ಹತ್ತಿ ಮನೆಯ ವಿಳಾಸ ಹೇಳಿದ್ದ ಯುವತಿಯು ಮದ್ಯದ ಅಮಲಿನಲ್ಲಿ ನಿದ್ರೆಗೆ ಜಾರಿದ್ದಳು ಎನ್ನಲಾಗಿದೆ.
ಇದರ ಲಾಭ ಪಡೆದ ಆಟೋ ಚಾಲಕ ಹೆಚ್ ಎಸ್ ಆರ್ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸ್ನೇಹಿತರನ್ನು ಕರೆಸಿಕೊಂಡು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಯತ್ನ ಎಸಗಿದ್ದಾರೆ ಎನ್ನಲಾಗಿದೆ.
ತೀವ್ರ ಅಸ್ವಸ್ಥಳಾಗಿದ್ದ ಯುವತಿ ಎಮರ್ಜೆನ್ಸಿ ನಂಬರ್‌ಗಳಾಗಿ ತಂದೆ ಮತ್ತು ಸ್ನೇಹಿತೆಯ ನಂಬರ್ ನೀಡಿದ್ದಳು. ಎಮರ್ಜೆನ್ಸಿ ನಂಬರ್‌ಗೆ ಕರೆ ಹೋದಾಗ ಸಂತ್ರಸ್ತೆಯ ತಂದೆ ಮಗಳ ಗೆಳತಿಗೆ ಕರೆ ಮಾಡಿದ್ದರು. ಸ್ನೇಹಿತರು ಬಂದಾಗ ಸಂತ್ರಸ್ತೆಯ ಸ್ಥಿತಿ ಶೋಚನೀಯವಾಗಿತ್ತು. ಸಂತ್ರಸ್ತೆಯ ಬಟ್ಟೆ ಹರಿದು ಹೋಗಿತ್ತು ಎನ್ನಲಾಗಿದೆ. ಕಾರಿನ ಟಾರ್ಪಲ್‌ನಿಂದ ಯುವತಿ ಯನ್ನು ಮುಚ್ಚಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯಯತ್ನ ತಿಳಿದ ಆಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
