ಉದಯವಾಹಿನಿ, ಬೆಂಗಳೂರು: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ ಹಣ ಬಳಕೆಯಾಗಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಕೇಂದ್ರ ಚುನಾವಣಾ ಆಯೋಗ ಈ ಕೂಡಲೇ ಮಧ್ಯಪ್ರವೇಶಸಿ ಈ ಆಯ್ಕೆ ಯನ್ನು ರದ್ದುಗೊಳಿ ಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಸಚಿವರೊಬ್ಬರು ಈ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾದರೂ ಅದರ ಹೊಣೆಯನ್ನು ಹೊರುವಲ್ಲಿ ಮುಖ್ಯಮಂತ್ರಿಗಳು ಹಾಗೂ ಇಡೀ ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇಡಿ ತನಿಖೆ ಇನ್ನಷ್ಟು ವಿಸ್ತರಿಸಿದರೆ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬೆನ್ನಿಗೆ ನಿಂತಿದ್ದ ದೊಡ್ಡ ಶಕ್ತಿಗಳ ಮುಖವಾಡವೂ ಬಯಲಾಗುತ್ತದೆ. ಮುಂದಿನ ವಿಚಾರಣೆಯಲ್ಲಿ ಈ ಹಗರಣದ ಪೂರ್ಣ ಸತ್ಯ ಬಯಲಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಲೂಟಿಯಾದ ಹಣ ಯಾರ್ಯಾರಿಗೋ ಹರಿದು ಹಂಚಿ ಹೋಗಿರುವ ಭಾಗದಲ್ಲಿ ಲೋಕಸಭಾ ಚುನಾವಣೆಗೆ ಬಹುದೊಡ್ಡ ಮೊತ್ತ ಬಳಕೆಯಾಗಿರುವುದು ಸ್ಪಷ್ಟವಾಗಿದೆ. ರಾಜ್ಯದ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಯಾವ ಪರಿಯಲ್ಲಿ ಚುನಾವಣೆಯಲ್ಲಿ ಗೆದ್ದಿದೆ ಎನ್ನುವುದನ್ನು ಬಳ್ಳಾರಿಯ ಲೋಕಸಭೆಯ ಫಲಿತಾಂಶದಲ್ಲಿ ಉತ್ತರ ದೊರಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದುರ್ಮಾರ್ಗಗಳಿಂದ ಗಳಿಸಿದ ಕಪ್ಪು ಹಣದಿಂದ ಚುನಾವಣೆ ಗೆಲ್ಲುತ್ತಿದ್ದ ಕಾಂಗ್ರೆಸ್ ಇದೀಗ ಸರ್ಕಾರಿ ಖಾತೆಯಿಂದ ಲೂಟಿಯಾದ ಹಣದಿಂದಲೂ ಚುನಾವಣೆ ನಿರ್ವಹಿಸುವಷ್ಟು ಕೀಳುಮಟ್ಟದ ಕ್ರಿಮಿನಲ್ ಮಾರ್ಗ ಅನುಸರಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಯಾವ ಲಜ್ಜೆಗೇಡಿ ಮಾರ್ಗವನ್ನು ಅನುಸರಿಸಲು ಹಿಂದೇಟು ಹಾಕುವುದಿಲ್ಲ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
