ಉದಯವಾಹಿನಿ, ಬೆಳಗಾವಿ: ಶಾಲೆಗಳಲ್ಲಿ ಪಾಠ ಮಾಡದೇ ಇತರೇ ಕೆಲಸ ಮಾಡುತ್ತ ತಿರುಗಾಡುವ ಶಿಕ್ಷಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದಿದ್ದಾರೆ.
ಸುದ್ದಿಗಾರರಿಗೆ ಮಾತನಾಡಿದ ಅವರು, ಶಿಕ್ಷಕರಾದವರು ಶಾಲೆಯಲ್ಲೇ ಇದ್ದು ಮಕ್ಕಳಿಗೆ ಶಿಕ್ಷಣ ನೀಡಲಿ. ಅದು ಬಿಟ್ಟು ರಾಜಕೀಯ, ಸಂಘಟನೆ, ವ್ಯವಹಾರ ಮಾಡುತ್ತ ತಿರುಗಾಡುತ್ತಿದ್ದಾರೆ ಎಂಬ ದೂರುಗಳಿವೆ. ಶಿಕ್ಷಣಾಧಿಕಾರಿಗಳ ನಿಯಂತ್ರಣದಲ್ಲೂ ಇಲ್ಲದಂತೆ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಿಕ್ಷಕರು ಇಲ್ಲವೇ ಸರಕಾರಿ ನೌಕರರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ ಎಂದ ಮಾತ್ರಕ್ಕೆ ಅದನ್ನೇ ಮುಖ್ಯ ಕಾಯಕ ಮಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ.ನ್ಯಾಯಾಲಯ ಎನ್ನುವುದು ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ. ನ್ಯಾಯಿಕ ವಿಚಾರಣೆ ನಡೆದುಕೊಂಡು ಹೋಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವುದು ನಮೆಲ್ಲರ ಆಸೆ, ಅವರು ಮುಂದುವರೆಯುತ್ತಾರೆ ಎಂದರು.ಕೋರ್ಟ್ ನಲ್ಲಿ ದೆಹಲಿ ಸಿಎಂ ಅರವಿಂದ ಕ್ರೇಜಿ ವಾಲ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರದ್ದು ಕೇಸ್ ಇದೆ, ಇವರಿಗೆ ಸಿದ್ದರಾಮಯ್ಯ ಅಷ್ಟೇ ಯಾಕೆ ಕಾಣುತ್ತಾರೆ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
ನಮ ತಂದೆ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬೇಕಾದಷ್ಟು ಕೇಸ್ ಗಳನ್ನ ನಾವು ಸಹ ನೋಡಿದ್ದೇವೆ, ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸಿಎಂ ರೇಸ್ ನಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಿನವರು ಇದ್ದಾರೆ ಎಂಬ ಬಿಜೆಪಿ ನಾಯಕರ ಆರೋಪ. ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.
