ಉದಯವಾಹಿನಿ, ಬೆಂಗಳೂರು: ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನವನ್ನು ಸರಿದೂಗಿಸಲು ಆರ್‌ಎಸ್‌ಎಸ್ ಮಧ್ಯಪ್ರವೇಶ ಮಾಡಿದ್ದು, ನಾಳೆ ಮಹತ್ವದ ಸಭೆ ನಡೆಸಲಿದೆ. ಸಭೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್‌ದಾಸ್ ಅಗರವಾಲ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 40 ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ.
ಮಾಗಡಿ ರಸ್ತೆ ಚೆನ್ನೇನಹಳ್ಳಿಯಲ್ಲಿರುವ ಆರ್‌ಎಸ್‌ಎಸ್‌ನ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ, ಸದಸ್ಯತ್ವ ನೋಂದಣಿ, ಹಲವು ಮಹತ್ವದ ವಿಷಯಗಳು ಚರ್ಚೆಗೆ ಒಳಪಡಲಿವೆ.
ಸಾಮಾನ್ಯವಾಗಿ ಬಿಜೆಪಿಯ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಹಿಂದೇಟು ಹಾಕುವ ಆರ್‌ಎಸ್‌ಎಸ್ ನಾಯಕರು ಕೇಂದ್ರ ಸಚಿವರ ಮನವಿ ಮೇರೆಗೆ ಬೈಟಕ್ ನಡೆಸಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.
