ಉದಯವಾಹಿನಿ, ನರೇಗಲ್:‌ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದೆ. ಗ್ರಾಮದ ತುಂಬಾ ರಸ್ತೆಯಲ್ಲಿಯೇ ಹಾಗೂ ಮನೆಯ ಮುಂದೆ ತಿಂಗಳಾನುಗಟ್ಟಲೆ ಕಸದ ರಾಶಿ ಬಿದ್ದಿರುತ್ತದೆ. ಚರಂಡಿ ತುಂಬಾ ಹೂಳು ತುಂಬಿರುತ್ತದೆ. ಅನೇಕ ಕಡೆಗಳಲ್ಲಿ ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದೆ.
ಮಳೆ ಬಂದರೆ ಹೆಜ್ಜೆ ಇಡದಂತೆ ರಸ್ತೆಗಳು ಜಲಾವೃತಗೊಳ್ಳುತ್ತವೆ. ಇದರ ನಡುವೆಯೇ ವಾಸ ಮಾಡಬೇಕಾದ ಸ್ಥಿತಿಯನ್ನು ಗ್ರಾಮದ ಜನರು ಎದುರಿಸುತ್ತಿದ್ದಾರೆ.
1ನೇ ವಾರ್ಡ್‌ನ ಪರಿಶಿಷ್ಟ ಸಮುದಾಯದವರ ಕಾಲೊನಿಯಲ್ಲಿ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿದೆ. ಕಸದ ರಾಶಿಯಿಂದ ಸಂಚಾರಕ್ಕೂ ತೊಂದರೆಯಾಗಿದೆ. ಅಷ್ಟೇ ಅಲ್ಲದೆ ತಿಂಗಾಳನುಗಟ್ಟಲೆ ಕಸದ ರಾಶಿ ಅಲ್ಲಿಯೇ ಇರುವ ಕಾರಣ ಕೋಳಿ, ನಾಯಿ ಹಾಗೂ ಇತರ ಪ್ರಾಣಿಗಳು ಕಸವನ್ನು ಓಣಿಯ ತುಂಬಾ ಹರಡುತ್ತವೆ. ಇದರಿಂದ ಸೊಳ್ಳೆಗಳ ಉತ್ಪತ್ತಿಯೂ ಜಾಸ್ತಿಯಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಕಸದ ರಾಶಿಯ ದುರ್ವಾಸನೆಗೆ ಬೇಸತ್ತಿದ್ದಾರೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿದ್ದಾರೆ. ಚರಂಡಿ ನಿರ್ಮಾಣ ಮಾಡದೇ ಇರುವ ಕಾರಣ ಜನರು ಬಳಕೆ ಮಾಡಿದ ನೀರು ರಸ್ತೆಗೆ ಬರುತ್ತದೆ. ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಹತ್ತಿರ ಚರಂಡಿ ಸ್ವಚ್ಛಗೊಳಿಸದೇ ಇರುವ ಕಾರಣ ಹೂಳು ತುಂಬಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಲ್ಲ, ಪೌಡರ್‌ ಹಾಕಿಲ್ಲ. ಇತರ ವಾರ್ಡ್‌ಗೆ ನೀಡುವ ಕಾಳಜಿಯನ್ನು ನಮ್ಮ ಪರಿಶಿಷ್ಟ ಸಮುದಾಯದವರ ವಾರ್ಡ್‌ಗೆ ನೀಡುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳಾದ ದ್ಯಾಮಣ್ಣ ಕನಕಪ್ಪ ಮಾದರ, ಹನಮಂತ ಮಾದರ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!