ಉದಯವಾಹಿನಿ, ಹಾಸನ: ‘ಜಿಲ್ಲೆಯಲ್ಲಿ ಕನ್ನಡ ರಥ ಯಾತ್ರೆಯನ್ನು ಸಾಂಪ್ರದಾಯಿಕ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಜನರ ಗಮನ ಸೆಳೆಯುವಂತೆ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಯಶಸ್ಸಿಗೆ ಕ್ರಮ ಕೈಗೊಳ್ಳುವಂತೆ’ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅಧಿಕಾರಿಗಳಿಗೆ ಸೂಚಿಸಿದರು.
‘ಕರ್ನಾಟಕ ಸಂಭ್ರಮ -50’ ಅಡಿ, ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಜಿಲ್ಲೆಗೆ ಬರುತ್ತಿರುವ ರಥ ಯಾತ್ರೆಯ ಸ್ವಾಗತ ಹಾಗೂ ಬೀಳ್ಕೊಡುವ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಾರ್ಯಕ್ರಮ ಅದ್ಬುತವಾಗಿ ಮೂಡಿ ಬರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ’ ಸೂಚಿಸಿದರು.
ರಥಯಾತ್ರೆ ಸಾಗುವ ಮಾರ್ಗದಲ್ಲಿ ಸಿಗುವ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಕನ್ನಡ ಹಬ್ಬದ ಸಡಗರ, ಸಂಭ್ರಮವನ್ನು ಆನಂದಿಸುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮೆರವಣಿಗೆಯಲ್ಲಿ ಸ್ಥಳೀಯ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆ ಹಾಗೂ ದ್ವಿಚಕ್ರ ವಾಹನ ರ‍್ಯಾಲಿ, ಆಟೋಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವಿನೂತನವಾಗಿ ಮೂಡಿಬರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
