ಉದಯವಾಹಿನಿ, ಅಜ್ಜಂಪುರ: ಅಧಿಕ ಮಳೆಯಿಂದ ತಾಲ್ಲೂಕಿನ ಈರುಳ್ಳಿ ಇಳುವರಿ ಕುಸಿತ ಕಂಡಿದೆ. ಬೆಳೆ ತೆಗೆಯಲು ಮಾಡಿದ ವೆಚ್ಚಕ್ಕೆ ಸಮಾನ ಆದಾಯ ಈರುಳ್ಳಿ ಮಾರಾಟದಿಂದ ಸಿಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ಆತಂಕದಿಂದ ಹೇಳುತ್ತಿದ್ದಾರೆ.
ಒಂದೆಡೆ ಅತಿಯಾದ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಮಜ್ಜಿಗೆ ರೋಗ, ತಳರೋಗ, ಶಿಲೀಂಧ್ರ ರೋಗ ಬಾಧಿಸಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಅರ್ಧದಷ್ಟು ಬೆಳೆ ನೆಲಕಚ್ಚಿದೆ, ಬೆಳೆ ತೆಗೆದು ಉತ್ತಮ ಆದಾಯ ಪಡೆಯುವ ನಿರೀಕ್ಷೆಗೆ ಪೆಟ್ಟುಬಿದ್ದಿದೆ ಎಂದು ರೈತರು ಸಂಕಟ ತೋಡಿಕೊಳ್ಳುತ್ತಿದ್ದಾರೆ.
ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿ, ಮದ್ದು ಸಿಂಪಡಣೆ, ಕಳೆ ತೆಗೆಯುವ ಕಾರ್ಯ ಸೇರಿದಂತೆ ಈರುಳ್ಳಿ ಬೆಳೆ ಬೆಳೆಯಲು ಎಕರೆಗೆ ಸುಮಾರು ₹ 30 ಸಾವಿರ ಖರ್ಚಾಗಿದೆ. ಕೀಳಲು ಮತ್ತು ಹಸನುಗೊಳಿಸಲು ₹ 20 ಸಾವಿರ ವೆಚ್ಚ ಮಾಡಿದ್ದೇನೆ. ಅಷ್ಟು ಆದಾಯವೂ ಕೈಗೆ ಸಿಕ್ಕಿಲ್ಲ ಎಂದು ತಿಮ್ಮಪ್ಪ ಅಳಲು ತೋಡಿಕೊಂಡರು.
ವರವಾಗಬೇಕಿದ್ದ ವರುಣ, ಈ ಬಾರಿ ಕಾಡಿತು. ಆರಂಭದಿಂದಲೂ ನಿರಂತರವಾಗಿ ಸುರಿದ ಮಳೆಯಿಂದಾಗಿ ಎಲ್ಲವೂ ಏರುಪೇರಾಯಿತು. ಈರುಳ್ಳಿ ಗಡ್ಡೆ ಹಿಗ್ಗಲಿಲ್ಲ. ಈಗ ಬಂದಿರುವ ಚಿಕ್ಕ ಗಾತ್ರದ (ಗುಲ್ಟಿ) ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ದರವೂ ಕಡಿಮೆ ಎಂದು ಶಿವನಿ ಆರ್.ಎಸ್ ಭಾಗದ ಬಸಪ್ಪ ಬೇಸರ ವ್ಯಕ್ತಪಡಿಸಿದರು.
3ಎಕರೆಯಲ್ಲಿ ಈರುಳ್ಳಿ ಕೃಷಿ ಕೈಗೊಂಡಿದ್ದೆ. ಬೆಳೆಗಾಗಿ ₹ 1.5 ಲಕ್ಷ ವೆಚ್ಚ ಮಾಡಿದ್ದೆ. ಈರುಳ್ಳಿ ಹಸನಿಗೆ ಮತ್ತಷ್ಟು ಹಣ ಖರ್ಚು ಮಾಡಬೇಕಾಗಿ ಬಂತು. ಬರುವ ಆದಾಯಕ್ಕಿಂತ ಮಾಡಿದ ವೆಚ್ಚವೇ ಅಧಿಕಗೊಳ್ಳುವ ಸೂಚನೆ ಸಿಕ್ಕಿತು. ಹೀಗಾಗಿ ಹೊಲದಲ್ಲಿಯೇ ಬೆಳೆ ನಾಶಗೊಳಿಸಿದೆ ಎಂದು ಗೌರಾಪುರದ ಪ್ರಶಾಂತ್ ಅಳಲು ತೋಡಿಕೊಂಡರು.

Leave a Reply

Your email address will not be published. Required fields are marked *

error: Content is protected !!