ಉದಯವಾಹಿನಿ, ತುಮಕೂರು: ಬಾರಿಗೆ ಜಿಲ್ಲಾ ಆಡಳಿತ ಆಚರಣೆ ಮಾಡುತ್ತಿರುವ ‘ತುಮಕೂರು ದಸರಾ’ಗೆ ಗುರುವಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಶೈಲಾಪುತ್ರಿ ದೇವಿಗೆ ಪ್ರಮುಖರು ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮುಂದಿನ ಒಂದು ವಾರ ಕಾಲ ನಗರದಲ್ಲಿ ನವರಾತ್ರಿ ಚಟುವಟಿಕೆಗಳು ಗರಿಗೆದರಲಿವೆ.
ಪ್ರತಿ ದಿನವೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಯುವ ದಸರಾ, ರೈತ, ಮಹಿಳಾ ದಸರಾ ಹಮ್ಮಿಕೊಳ್ಳಲಾಗಿದ್ದು, ಕಾಲೇಜು ಮೈದಾನದಲ್ಲಿ ಎರಡು ಹೆಲಿಕಾಪ್ಟರ್‌ಗಳನ್ನು ಪ್ರದರ್ಶನಕ್ಕೆ ನಿಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತದೆ. ಇಡೀ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ವೇದಿಕೆ ಸಮೀಪವೇ ನಿರ್ಮಿಸಿರುವ ದುರ್ಗೆಯ ಮತ್ತೊಂದು ರೂಪವಾಗಿರುವ ಶ್ರೀಶೈಲಾಪುತ್ರಿ ದೇವಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಸಿದ್ಧಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ಇತರರು ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪರಮೇಶ್ವರ ಮಾತನಾಡಿ, ‘ಇದೇ ಸ್ಥಳದಲ್ಲಿ ಕೆಲವು ಹಿರಿಯರು ದಸರಾ ಆಚರಣೆ ಮಾಡಿಕೊಂಡು ಬಂದಿದ್ದರು. ಆದರೆ ಈ ಬಾರಿ ಜಿಲ್ಲಾ ಆಡಳಿತದ ವತಿಯಿಂದ ಆಚರಣೆ ಮಾಡುತ್ತಿದ್ದು, ಕೆಲವರಿಗೆ ಇಷ್ಟ ಇಲ್ಲದಿರಬಹುದು. ಯಾರಿಗೆಲ್ಲ ಇಷ್ಟ ಆಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಬಗ್ಗೆ ಏನೆಲ್ಲ ಅಭಿಪ್ರಾಯ ಇಟ್ಟುಕೊಂಡಿದ್ದಾರೋ ಎಂಬುದು ಗೊತ್ತಿಲ್ಲ. ಅದೆಲ್ಲವನ್ನು ಪಕ್ಕಕ್ಕೆ ಇಟ್ಟು, ಆಚರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು. ‘ಹಿಂದೂ ಧರ್ಮ ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸೇರಿದ ಧರ್ಮ. ಧರ್ಮದ ವಿಚಾರ ಎಲ್ಲರಿಗೂ ತಲುಪಬೇಕು. ಧರ್ಮದ ಆಧಾರದ ಮೇಲೆ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಭಾರತದ ಸಂಸ್ಕೃತಿ ಹಿಂದೂ ಧರ್ಮದ ಮೇಲೆ ನಿಂತಿದೆ. ಯಾರೋ ನಾಲ್ಕು ಜನ ಸೇರಿದರೆ ಹಿಂದೂ ಧರ್ಮವಾಗುವುದಿಲ್ಲ’ ಎಂದು ಪರ್ಯಾಯ ದಸರಾ ಆಚರಣೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಕುಟುಕಿದರು.
