ಉದಯವಾಹಿನಿ, ಬೆಂಗಳೂರು: ಇತ್ತೀಚೆಗೆ ಆನೇಕಲ್‌ನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಪಾಕಿಸ್ತಾನೀಯರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಪಾಕ್ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿಸಲಾಗಿತ್ತು. ಈ ತಂಡಗಳು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹೈದ್ರಾಬಾದ್, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನೀಯರನ್ನು ಪತ್ತೆ ಹಚ್ಚಿ ಬಂಧಿಸಿವೆ. ದೆಹಲಿಯಲ್ಲಿ 5 ಮಂದಿ,ಹೈದ್ರಾಬಾದ್ – ಇಬ್ಬರು, ಉತ್ತರ ಪ್ರದೇಶ – ಇಬ್ಬರು, ರಾಜಸ್ಥಾನದಲ್ಲಿ ಮೂವರು ಪಾಕಿಸ್ತಾನೀಯರನ್ನು ಬಂಧಿಸಿ ನಗರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ತನಿಖಾ ತಂಡಗಳು ಕಲೆ ಹಾಕುತ್ತಿವೆ
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಹಿಂದೂ ಹೆಸರಿಟ್ಟುಕೊಂಡು ನೆಲೆಸಿದ್ದ ಪಾಕ್ ಪ್ರಜೆಗಳ ಬಂಧನದ ನಂತರ ವಿಚಾರಣೆ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ದೇಶಾದ್ಯಂತ ಸಕ್ರಿಯರಾಗಿದ್ದ ಪಾಕಿಸ್ತಾನಿಯರನ್ನು ಬಂಧಿಸಿದ್ದಾರೆ. 12 ಮಂದಿ ಪಾಕಿಸ್ತಾನಿಯರಲ್ಲದೆ ಇನ್ನಷ್ಟು ಪಾಕ್ ಪ್ರಜೆಗಳ ಜಾಲವೇ ದೇಶದಲ್ಲಿ ವಿಸ್ತರಿಸಿರುವ ಆತಂಕ ಎದುರಾಗಿದ್ದು, ಬಂಧಿತರ ವಿಚಾರಣೆಯಿಂದ ಒಂದೊಂದಾಗಿ ಇನ್ನಷ್ಟು ಮಾಹಿತಿ ಹೊರಬರಲಿದೆ.
