ಉದಯವಾಹಿನಿ, ಕೆಆರ್ ಪುರ : ದಸರಾ ಹಬ್ಬದ ಅಂಗವಾಗಿ ದುರ್ಗಾದೇವಿ ಪ್ರತಿಷ್ಠಾಪನೆ ಮಾಡಿ ಅದ್ಧೂರಿ ಉತ್ಸವಗಳನ್ನು ನಡೆಸುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕ್ಷೇತ್ರದ ಮೇಡಹಳ್ಳಿಯಲ್ಲಿ ರಾಷ್ಟ್ರೀಯ ದುರ್ಗಾ ಪೂಜಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಆರ್‌ಪುರ ಕ್ಷೇತ್ರಾದ್ಯಂತ ದಸರಾ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬ ಆಚರಣೆಗಳಲ್ಲಿ ಭಾಗವಹಿಸಿ ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ನೀಡುವಂತೆ ತಿಳಿಸಿದರು.
ಈ ಹಬ್ಬಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಒಂದೇ ಸಾಮರಸ್ಯದ ಭಾವನೆ ಮೂಡಿಸಬೇಕು ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಅಖಿಲೇಶ್ ಪಾಂಡೆ ಮಾತನಾಡಿ, ಮೇಡಹಳ್ಳಿಯ ಕೋದಂಡರಾಮಸ್ವಾಮಿ ಸಭಾಂಗಣದಲ್ಲಿ ೧೦ ದಿನಗಳ ಕಾಲ ಅದ್ದೂರಿಯಾಗಿ ದಸರ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಕಳೆದ ೧೬ ವರ್ಷಗಳಿಂದ ಈ ದಸರ ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದು ಸ್ಥಳೀಯ ಶಾಸಕರು ಬೆಂಬಲ ನೀಡುತ್ತಾ ಬಂದಿರುವುದು ಸಂತಸ ತಂದಿದೆ. ಮೇಡಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಈ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
