ಉದಯವಾಹಿನಿ, ಯಾದಗಿರಿ: ತಾಲ್ಲೂಕಿನ ಸುಕ್ಷೇತ್ರ, ಗುಹಾಂತರ ದೇವಾಲಯ ಮೈಲಾಪುರ ಮೈಲಾರಲಿಂಗೇಶ್ವರ ದೇಗುಲಕ್ಕೆ ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ರೂಪಿಸುತ್ತಿದ್ದು, ಈಚೆಗೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ಸಿಕ್ಕಿದೆ. ಮೈಲಾರಲಿಂಗೇಶ್ವರ ದೇವರು ರಾಜ್ಯದವರಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲೂ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ. ಹೀಗಾಗಿ ಈ ಭಾಗದ ಪ್ರಮುಖ ದೇವಸ್ಥಾನವೂ ಆಗಿದೆ. ಹೀಗಾಗಿ ಭಕ್ತರು ಮತ್ತು ಚಾರಣಿಗರನ್ನು ಸೆಳೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮೈಲಾರಲಿಂಗ ದೇವರ 77 ಕ್ಷೇತ್ರಗಳ ಪೈಕಿ ಮೈಲಾಪುರ ಕೊನೆಯ ಕ್ಷೇತ್ರವಾಗಿದೆ. ದೇಶದ 77 ಕ್ಷೇತ್ರಗಳಲ್ಲಿ ಒಂದೊಂದು ಅವತಾರದಲ್ಲಿ ಮೈಲಾರಲಿಂಗ ದೇವರು ಕಾಣಿಸಿಕೊಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಗುಹಾಂತರ ದೇವಾಲಯದಲ್ಲಿ ಒಂದೇ ಬೃಹತ್ ಕಲ್ಲು ಬಂಡೆ ಇದ್ದು, ಮೂರು ಕಡೆಯೂ ದೇವಸ್ಥಾನ ನಿರ್ಮಿಸಲಾಗಿದೆ. ಮೈಲಾರಲಿಂಗೇಶ್ವರ ದೇವರಿಗೆ ಇಬ್ಬರು ಪತ್ನಿಯರಿದ್ದು, ಧರ್ಮಪತ್ನಿ ಗಂಗಿ ಮಾಳಮ್ಮ, ಎರಡನೇ ಪತ್ನಿ ತುರಂಗ ಬಾಲಮ್ಮ ಇಬ್ಬರಿಗೂ ದೇಗುಲ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ 600ರಿಂದ 700 ವರ್ಷಗಳ ಇತಿಹಾಸ ಇದೆ. 6 ಕುಟುಂಬಗಳು ಇಲ್ಲಿ ಪೂಜಾರಿಕೆ ಮಾಡಿಕೊಂಡು ಬರುತ್ತಿವೆ. ವರ್ಷದಲ್ಲಿ ಎರಡು ಬಾರಿ ಜಾತ್ರೆ, ಉತ್ಸವ ನಡೆಯುತ್ತದೆ. ದೀಪಾವಳಿ, ಸಂಕ್ರಾತಿ ದಿನ ಇಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತವೆ.
