ಉದಯವಾಹಿನಿ, ಕೂಡ್ಲಿಗಿ : ಹಳ್ಳದ ನೀರಿನಲ್ಲಿ ಈಜಾಡಲು ಹೋಗಿದ್ದ ಒಡಹುಟ್ಟಿದ ಇಬ್ಬರು ಹಾಗೂ ಅವರ ಸ್ನೇಹಿತ ಸೇರಿ ಮೂವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಗಡಿಗ್ರಾಮವಾದ ಕುಮತಿ ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಗಂಗಮ್ಮನಗುಂಡಿಯಲ್ಲಿ ಸಂಭವಿಸಿದೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಲಕ್ಷ್ಮೀದೇವಿ ಮತ್ತು ಜಯಣ್ಣ ದಂಪತಿಯ ಪುತ್ರರಾದ ಗುರುರಾಜ (೧೪), ವಿನಯ್ (೧೧) ಸಹೋದರರು ಹಾಗೂ ಆರ್.ನಾಗಮ್ಮ ಮತ್ತು ಎ.ಕೆ.ಸೋಮಣ್ಣ ದಂಪತಿಯ ಪುತ್ರ ಎಸ್.ಸಾಗರ್ (೧೪) ಮೃತ ದುರ್ದೈವಿಗಳು.
ಕಾನಹೊಸಹಳ್ಳಿಯ ಬಿಸಿಎಂ ಬಾಲಕರ ಹಾಸ್ಟೆಲ್‌ನಲ್ಲಿದ್ದು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ ಮತ್ತು ೬ನೇ ತರಗತಿಯಲ್ಲಿ ಓದುತ್ತಿದ್ದ ಗುರುರಾಜ ಮತ್ತು ವಿನಯ್ ಅವರು ದಸರಾ ರಜೆ ಹಿನ್ನೆಲೆ ತಮ್ಮೂರಿಗೆ ಬಂದಿದ್ದಾರೆ. ಅಲ್ಲದೆ, ಕುಮತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿ ಓದುತ್ತಿದ್ದ ಎಸ್.ಸಾಗರ್ ಅವರು ಜತೆಯಾಗಿ ಗ್ರಾಮದ ಸಮೀಪ ಹಳ್ಳಕ್ಕೆ ತೆರೆಳಿದ್ದಾರೆ.. ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಅವರ ಪಾಲಕರು ಅಲ್ಲಲ್ಲಿ ವಿಚಾರಿಸಿದ್ದಾರೆ. ಹಳ್ಳದ ಕಡೆ ಹೋಗಿದ್ದನ್ನು ನೋಡಿದವರು ತಿಳಿದಾಗ ಅಲ್ಲಿಗೆ ಹೋಗಿದ್ದ ಸಂದರ್ಭ ದಡದಲ್ಲಿ ಬಾಲಕರ ಬಟ್ಟೆ, ಚಪ್ಪಲಿ ಇರುವುದು ಗಮನಿಸಿದ್ದಾರೆ. ತಕ್ಷಣವೇ ಗಂಗಮ್ಮನ ಗುಂಡಿಯಲ್ಲಿದ್ದ ನೀರಿಗೆ ಇಳಿದು ಹುಡುಕಾಡಿದಾಗ ಮೂವರು ಬಾಲಕರ ಮೃತದೇಹಗಳು ಪತ್ತೆಯಾಗಿವೆ.

 

Leave a Reply

Your email address will not be published. Required fields are marked *

error: Content is protected !!