ಉದಯವಾಹಿನಿ, ಮಂಡ್ಯ: ತಾಲ್ಲೂಕಿನ ತಗ್ಗಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ‘ಫೇಸ್ ಬಯೋಮೆಟ್ರಿಕ್’ (ಮುಖ ಗುರುತಿಸುವಿಕೆ ಯಂತ್ರ) ಅಳವಡಿಸಲಾಗಿದೆ. ಈ ವಿನೂತನ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಬೆಳೆಸಲು ಮತ್ತು ಹಾಜರಾತಿ ಹೆಚ್ಚಿಸಲು ಸಹಕಾರಿಯಾಗಿದೆ.
ಸರ್ಕಾರದ ಅನುದಾನಕ್ಕೆ ಕಾಯದೆ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರ ನೆರವಿನಿಂದ ₹1 ಲಕ್ಷ ಸಂಗ್ರಹಿಸಿ, ಬಯೋಮೆಟ್ರಿಕ್ ಉಪಕರಣ ಅಳವಡಿಸಿರುವುದು ವಿಶೇಷ. ವಿದ್ಯಾರ್ಥಿಗಳು ಗೈರು ಹಾಜರಾಗುವುದನ್ನು ಮತ್ತು ಶಿಕ್ಷಕರು ವಿಳಂಬವಾಗಿ ಶಾಲೆಗೆ ಬರುವುದನ್ನು ಈ ಉಪಕರಣ ತಡೆಗಟ್ಟಿದೆ.
‘ಫೇಸ್ ಬಯೋಮೆಟ್ರಿಕ್‌ನಲ್ಲಿ ಡ್ಯಾಶ್ ಬೋರ್ಡ್ ಪ್ರೋಗ್ರಾಂ ಮೂಲಕ ಮಕ್ಕಳು, ಬೋಧಕರು ಮತ್ತು ಬೋಧಕರೇತರ ಸಿಬ್ಬಂದಿಯ ಮಾಹಿತಿ ಅಳವಡಿಸಿ, ನೋಂದಣಿ ಮಾಡಿಸಲಾಗಿದೆ. ಎರಡು ಸೆಕೆಂಡ್‌ಗಳಲ್ಲಿ ಒಬ್ಬರ ಹಾಜರಾತಿ ದಾಖಲಾಗುತ್ತದೆ.
ಇದರಿಂದ ಶೇ 98ರಷ್ಟು ಮಕ್ಕಳ ಹಾಜರಾತಿ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಚಕ್ಕರ್ ಹೊಡೆದ ಮಕ್ಕಳ ಬಗ್ಗೆ ಪೋಷಕರ ಮೊಬೈಲ್‌ಗೆ ಸಂದೇಶ ಕಳುಹಿಸಲು ನಿರ್ಧರಿಸಿದ್ದೇವೆ’ ಎಂದು ಎಸ್‌ಡಿಎಂಸಿ ಸದಸ್ಯ ಅನಿಲ್‌ಕುಮಾರ್ ಮಾಹಿತಿ ನೀಡಿದರು. ಪಿಎಂಶ್ರೀ ಯೋಜನೆಗೆ ಆಯ್ಕೆ: ‘ಕೇಂದ್ರ ಪ್ರಾಯೋಜಿತ ಪಿಎಂಶ್ರೀ (ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 129 ಶಾಲೆಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಈ ಶಾಲೆಯೂ ಸೇರಿದೆ. ಉನ್ನತೀಕರಿಸಿದ ಮೂಲಸೌಕರ್ಯ, ನವೀನ ಬೋಧನಾಶಾಸ್ತ್ರ ಮತ್ತು ತಂತ್ರಜ್ಞಾನದೊಂದಿಗೆ, ಅನುಕರಣೀಯ ಶಾಲೆಗಳನ್ನು ಮಾಡುವುದು ಯೋಜನೆಯ ಉದ್ದೇಶ. ಯೋಜನೆಯಡಿ ಇದುವರೆಗೆ ಶಾಲೆಗೆ ₹14 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಮುಖ್ಯಶಿಕ್ಷಕಿ ಪದ್ಮಾ ವಿ.ಬಿ. ತಿಳಿಸಿದರು.
