ಉದಯವಾಹಿನಿ, ವಿಜಯಪುರ: ಭಾರತವು ಹಲವು ವೈವಿಧ್ಯಗಳನ್ನು ಒಳಗೊಂಡ ದೇಶವಾಗಿದ್ದು, ಕರ್ನಾಟಕ ತನ್ನದೇಯಾದ ವಿಶಿಷ್ಟತೆ ಹೊಂದಿದ್ದು, ರಾಜ್ಯದ ಜನರ ದೈನಂದಿನ ಜೀವನದ ಕನ್ನಡ ಭಾಷೆಯ ಬಗ್ಗೆ ನಿರಂತರವಾಗಿ ಅಭಿಮಾನವಿರಲಿ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಬುಧವಾರ ಅವರು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ, ಭುವನೇಶ್ವರಿ ದೇವಿಗೆ ಮಾಲಾಪರ್ಣೆ ಮಾಡಿ ಮಾತನಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನ್ನಡ ಜ್ಯೋತಿ ರಥ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಚರಿಸಲಿದೆ. ಕನ್ನಡ ಜ್ಯೋತಿ ರಥಕ್ಕೆ ಸಾರ್ವಜನಿಕರು ಅಭೂತಪೂರ್ವ ಸ್ವಾಗತ ಕೋರಿ ಕನ್ನಡ ಸಾಹಿತ್ಯ ಸಮೇಳನದ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬರೂ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನವೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು. ನಾಡುನುಡಿಯ ಬಗ್ಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಸಾಹಿತ್ಯ, ಕಲೆ, ಸಾಂಸ್ಕøತಿಕ ಪರಂಪರೆಗಳನ್ನು ನಾವು ಅನುಸರಣೆ ಮಾಡಬೇಕು. ಇಂದಿನ ಯುವ ಜನಾಂಗಕ್ಕೆ ಕನ್ನಡ ನಾಡು ನುಡಿಯ ಬಗ್ಗೆ ಹಿರಿಯರ ತ್ಯಾಗ ಹಾಗೂ ಸಾಧನೆಗಳನ್ನು ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
