ಉದಯವಾಹಿನಿ, ಗುತ್ತಲ: ಇಲ್ಲಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹುದ್ದೆಗೆ ಶಿಕ್ಷಕರ ನಡುವೆಯೇ ಪೈಪೋಟಿ ಶುರುವಾಗಿದೆ. ಕೆಲ ದಿನಗಳ ಅವಧಿಯಲ್ಲಿ ಮೂವರು ಶಿಕ್ಷಕರು, ಪ್ರಭಾರಿ ಮುಖ್ಯಶಿಕ್ಷಕರಾಗಿ ಆದೇಶ ಪಡೆದುಕೊಂಡಿದ್ದಾರೆ. ಇದೇ ಹುದ್ದೆಯ ವಿಚಾರವಾಗಿ ಶಿಕ್ಷಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಾಲೆಯೊಳಗಿನ ಶಿಕ್ಷಕರ ಪೈಪೋಟಿಯ ಜಗಳ ಬೀದಿಗೆ ಬಂದಿದ್ದರಿಂದ, ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ. ಶಿಕ್ಷಕರ ನಡುವೆಯೇ ಪರಸ್ಪರಸಹಕಾರ ಇಲ್ಲದಿದ್ದರಿಂದ, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ.
‘ಸಿದ್ದರಾಮಯ್ಯ ಹಿರೇಮಠ ಅವರು ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಅವರು 2023ರಲ್ಲಿ ವರ್ಗಾವಣೆಗೊಂಡರು. ಮುಖ್ಯಶಿಕ್ಷಕ ಸಿದ್ದರಾಮಯ್ಯ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ, ಪ್ರಭಾರಿಯಾಗಿ ನೇಮಕಗೊಳ್ಳಲು ಶಾಲೆಯ ಶಿಕ್ಷಕ ಶಂಕರ ಎನ್.ಎ. ಅವರು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ’ ಎಂದು ಪೋಷಕರೊಬ್ಬರು ಹೇಳಿದರು.
‘ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಅದೇ ಶಾಲೆಯ ಸಹ ಶಿಕ್ಷಕ ಓ.ಸಿ. ಪಾಟೀಲ ಅವರನ್ನು, ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ನೀಡಿದ್ದರು. ಪಾಟೀಲ ಅವರು ಕೆಲಸ ಮಾಡಿಕೊಂಡು ಹೊರಟಿದ್ದರು. ಶಿಕ್ಷಕ ಶಂಕರ, ತಾವು ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಗೆ ಅರ್ಹರಿರುವುದಾಗಿ ವಾದಿಸಲಾರಂಭಿಸಿದ್ದರು. ಅದೇ ವಿಚಾರವಾಗಿ ಶಾಲೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇಬ್ಬರೂ ಶಿಕ್ಷಕರು, ಕೊಠಡಿಗಳಲ್ಲಿ ಮಕ್ಕಳ ಎದುರೇ ಏರು ಧ್ವನಿಯಲ್ಲಿ ಜಗಳ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.
