ಉದಯವಾಹಿನಿ, ಹಿರೀಸಾವೆ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮ್ಮಿಲನ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷದಿಂದ ಪಡಿತರ ಪಡೆಯಲು ಜನರು ದಿನಗಟ್ಟಲೇ ಪಡಿತರ ವಿತರಣಾ ಕೇಂದ್ರಗಳ ಮುಂದೆ ಕಾಯಬೇಕಾಗಿದೆ.
ಹೋಬಳಿಯಲ್ಲಿ ನ್ಯಾಯಬೆಲೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಸುಮಾರು 15 ಕಡೆ ಪಡಿತರ ವಿತರಣೆ ಆಗುತ್ತದೆ. ಕೇಂದ್ರಗಳಲ್ಲಿಯೂ ಜನರು ಬೆಳಿಗ್ಗೆ 7 ಗಂಟೆಯಿಂದಲೇ ಪಡಿತರ ಪಡೆಯಲು ಬರುತ್ತಿದ್ದಾರೆ. ಅದೃಷ್ಟ ಇದ್ದವರಿಗೆ ಬೆರಳಚ್ಚು ಬಂದು, ಪಡಿತರ ಸಿಗುತ್ತಿದೆ.ಈ ತಿಂಗಳ ಪಡಿತರವನ್ನು ಐದು ದಿನಗಳ (ಅ.18 ರಂದು) ಹಿಂದೆ ಸಾರ್ವಜನಿಕರಿಗೆ ವಿತರಣೆ ಮಾಡಲು ಇಲಾಖೆಯೂ ತಿಳಿಸಿತ್ತು. ಮೊದಲ ದಿನ ಸರ್ವರ್ ಸಮಸ್ಯೆ ಇಲ್ಲದೇ ಬೆರಳಚ್ಚು ಪಡೆದು ಜನರಿಗೆ ಪಡಿತರ ನೀಡಲಾಯಿತು.ಆದರೆ ನಾಲ್ಕು ದಿನದಿಂದ ತಾಂತ್ರಿಕ ದೋಷ ಉಂಟಾಗಿದ್ದು, ಕೆಲಸ ಕಾರ್ಯಗಳನ್ನು ಬಿಟ್ಟು ಮಹಿಳೆಯರು, ವೃದ್ದರು, ಅಂಗವಿಕಲರು ಗಂಟೆಗಟ್ಟಲೇ ವಿತರಣಾ ಕೇಂದ್ರಗಳ ಮುಂದೆ ಕಾಯುತ್ತಾ ಕುಳಿತುಕೊಳ್ಳುತ್ತಿದ್ದಾರೆ.’ದೀಪಾವಳಿ ಹಬ್ಬದ ಸಮಯ. ಒಂದು ವಾರದಿಂದ ಮಳೆಯಾಗುತ್ತಿದ್ದೆ. ಯಾವ ಸಮಯದಲ್ಲಿ ಪಡಿತರ ನೀಡುತ್ತಾರೋ ಗೊತ್ತಾಗುವುದು ಇಲ್ಲ. ನಾವು ಆ ಸಮಯದಲ್ಲಿ ಬರಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಪಡಿತರ ಪಡೆಯಲು ಬಂದಿದ್ದ ಮಂಜಮ್ಮ.’ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ಸರ್ವರ್ ಸರಿ ಇರುತ್ತದೆ. ಆ ಸಮಯದಲ್ಲಿ 30 ರಿಂದ 40 ಜನರಿಗೆ ಪಡಿತರವನ್ನು ನೀಡುತ್ತೇವೆ’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಮಾಲೀಕ ಹರೀಶ್.
‘ಈ ತಿಂಗಳಲ್ಲಿ ಉಳಿದಿರುವ 9 ದಿನಗಳಲ್ಲಿ ಪಡಿತರವನ್ನು ಜನರಿಗೆ ವಿತರಣೆ ಮಾಡಬೇಕಿದೆ. ಅದರಲ್ಲಿ 3 ರಜಾ ದಿನಗಳಿವೆ. ಉಳಿದ 6 ದಿನದಲ್ಲಿ ಎಲ್ಲರಿಗೂ ಪಡಿತರ ವಿತರಣೆ ಮಾಡಲು ಕಷ್ಟವಾಗುತ್ತದೆ’ ಎನ್ನುತ್ತಾರೆ ಪಡಿತರ ವಿತರಕರು.
