ಉದಯವಾಹಿನಿ, ನಾಗಮಂಗಲ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಕೋಟೆ ವಿದ್ಯಾಗಣಪತಿ ಮೂರ್ತಿಯನ್ನು 47 ದಿನಗಳ ನಂತರ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು, ಭಕ್ತರ ಸಮ್ಮುಖದಲ್ಲಿ ಮತ್ತು ಪೊಲೀಸ್‌ ಭದ್ರತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ, ವಿಸರ್ಜಿಸಲಾಯಿತು.
ಪಡುವಲಪಟ್ಟಣ ರಸ್ತೆಯಲ್ಲಿಯಲ್ಲಿರುವ ಕೋಟೆ ಗಣಪತಿಯ ವಿಸರ್ಜನಾ ಮಹೋತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಜೊತೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸಾಥ್‌ ನೀಡಿದರು.
ಅಲಂಕೃತಗೊಂಡ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯಲ್ಲಿ ಜನಪದ ಕಲಾತಂಡಗಳ ಪ್ರದರ್ಶನ, ಡಿ.ಜೆ ಸದ್ದಿಗೆ ಮಕ್ಕಳು, ಯುವಕರು ಮತ್ತು ಯುವತಿಯರು ಹೆಜ್ಜೆಹಾಕಿದರು. ಜನರು ಮೆರವಣಿಗೆ ಕಣ್ತುಂಬಿಕೊಳ್ಳಲು ಸಾರ್ವಜನಿಕರು ರಸ್ತೆ ಬದಿಯ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.
ಮೆರವಣಿಗೆ ಸಾಗುತ್ತಿದ್ದ ದಾರಿಯಲ್ಲಿ ಕಾಯಿ ಒಡೆದು ಪೂಜೆ ಮಾಡಿಸಿದರು. ಭಕ್ತರು ರಸ್ತೆಯಲ್ಲಿ ನೂರಾರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಭಕ್ತರ ದಣಿವಾರಿಸಲು ಮಜ್ಜಿಗೆ, ಪಾನಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಹಿಂಭಾಗ ಸುಮಾರು 10 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಭಕ್ತರು ಸ್ವಯಂ ಪ್ರೇರಿತವಾಗಿ ಬಾಳೆಹಣ್ಣಿನ ಗೊನೆಗಳನ್ನು ತಂದು ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!