ಉದಯವಾಹಿನಿ, ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದ ಶುಕ್ರವಾರ ಅಂತಿಮವಾಗಿ 26 ಅಭ್ಯರ್ಥಿಗಳು 46 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ, ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ.ಕಳೆದ ನಾಲ್ಕು ಅವಧಿಯಲ್ಲಿ ಕ್ಷೇತ್ರದಲ್ಲಿ ‘ಕಮಲ’ ಅರಳಿಸಿದ್ದ ಬಸವರಾಜ ಬೊಮ್ಮಾಯಿ, ಈ ಬಾರಿಯೂ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊತ್ತುಕೊಂಡಿದ್ದಾರೆ. 20 ವರ್ಷಗಳ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಮುಖಂಡರು, ಗೆಲ್ಲಲೇ ಬೇಕೆಂಬ ಹಠದೊಂದಿಗೆ ಸಂಘಟನೆ ಚುರುಕುಗೊಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪ್ರಬಲ ಸ್ಪರ್ಧೆ ನಡುವೆಯೂ ಕ್ಷೇತ್ರದ ಕೆಲವರು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್‌ಎಸ್ ಪಕ್ಷ, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್, ಉತ್ತಮ ಪ್ರಜಾಕೀಯ ಪಕ್ಷ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಟಿಪ್ಪು ಸುಲ್ತಾನ್ ಪಾರ್ಟಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.’ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಅಂತಿಮವಾಗಿ 26 ಅಭ್ಯರ್ಥಿಗಳು 46 ನಾಮಪತ್ರ ಸಲ್ಲಿಸಿದ್ದಾರೆ. ಅ. 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅ. 30 ಕೊನೆಯ ದಿನವಾಗಿದೆ’ ಎಂದು ಚುನಾವಣಾಧಿಕಾರಿ ಮಹ್ಮದ್ ಖಿಜರ್ ತಿಳಿಸಿದರು.
‘ನಾಮಪತ್ರ ಪ್ರಕ್ರಿಯೆ ಮಹತ್ವದ್ದು. ಹೀಗಾಗಿ, ಕೆಲವರು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದಾರೆ. ಪರಿಶೀಲನೆ ಸಂದರ್ಭದಲ್ಲಿ ಕ್ರಮಬದ್ಧ ನಾಮಪತ್ರಗಳನ್ನು ಮಾನ್ಯ ಮಾಡಲಾಗುವುದು. ಇದಾದ ನಂತರ, ನಾಮಪತ್ರ ವಾಪಸು ಪಡೆಯಲು ಅವಕಾಶವಿದೆ. ಅ. 30ರ ನಂತರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದು ಹೇಳಿದರು.
ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ನೃತ್ಯ ಮಾಡಿದರು ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಮೆರವಣಿಗೆ ನಡೆಸಿದ್ದ ಸಂದರ್ಭದಲ್ಲಿ ಹಾರದಲ್ಲಿದ್ದ ಸೇಬು ಹಣ್ಣಿನ ಕಿತ್ತುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು.
