ಉದಯವಾಹಿನಿ, ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಕುತೂಹಲದ ಕಣವಾಗಿ ಮಾರ್ಪಟ್ಟಿದ್ದು, ಕ್ಷೇತ್ರದ ಎರಡು ಪ್ರಬಲ ಒಕ್ಕಲಿಗ ನಾಯಕರ ನಡುವೆ ನಿಜವಾದ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗ ಸಮುದಾಯ ಮತ್ತು ಪ್ರದೇಶದೊಳಗೆ ತಮ್ಮ ಬೆಂಬಲದ ನೆಲೆಯನ್ನು ಕ್ರೊಢೀಕರಿಸಲು ಪರಸ್ಪರರನ್ನು ಮೀರಿಸಲು ಎರಡೂ ಪಕ್ಷಗಳ ನಾಯಕರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ 2023ರ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಗೆದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನೆರೆಯ ಕನಕಪುರದಿಂದ 1.2 ಲಕ್ಷ ಮತಗಳ ಅಂತರದಿಂದ ಚುನಾಯಿತರಾದರು. ನಂತರ ಕುಮಾರಸ್ವಾಮಿ ಮಂಡ್ಯ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ವಿಧಾನಸಭಾ ಸ್ಥಾನ ತೆರವು ಮಾಡಿದ ನಂತರ ಈಗ ನಿಖಿಲ್ ಕುಮಾರಸ್ವಾಮಿ ಬಹುನಿರೀಕ್ಷೆಯ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಇದರಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಒಕ್ಕಲಿಗ ನಾಯಕ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಮೂಲಕ ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಈ ಮೊದಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಅವರ ಕಿರಿಯ ಸಬಹೋದರ ಡಿಕೆ.ಸುರೇಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಒಂದು ವೇಳೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸುರೇಶ್ ಸೋತಿದ್ದರೆ ಶಿವಕುಮಾರ್ ಅವರ ಇಮೇಜ್ ಗೆ ಧಕ್ಕೆಯಾಗುವ ಸಾಧ್ಯತೆಗಳಿತ್ತು. ಹೀಗಾಗಿ ಒಕ್ಕಲಿಗ ಹೃದಯ ಭಾಗದಲ್ಲಿ ಪ್ರಬಲವಾಗಿರುವ ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿ, ಯೋಗೇಶ್ವರ್ ಜೊತೆ ಶಾಂತಿ ಸಂಧಾನ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾದರು.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪಕ್ಷದ ಈ ನಿರ್ಧಾರವು ಈ ಭಾಗದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಸದೃಢಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
