ಉದಯವಾಹಿನಿ, ಬೆಂಗಳೂರು: ಸುಪ್ರೀಂಕೋರ್ಟ್‌ನ ೭ ನ್ಯಾಯಾಧೀಶರ ಆದೇಶದಂತೆ,ಸದಾಶಿವ ಆಯೋಗದ ವರದಿ ಶೀಘ್ರ ಜಾರಿ ಹಾಗೂ ಜಾರಿಯಾಗುವವರೆಗೂ ಎಲ್ಲಾ ಉದ್ಯೋಗ ನೇಮಕಾತಿ ರದ್ದು ಮಾಡಬೇಕು, ರಾಜ್ಯಾದ್ಯಂತ ಹೋರಾಟ ರೂಪಿಸಲು ನವೆಂಬರ್ ೨ನೇ ವಾರದಿಂದ ರಾಜ್ಯಾದ್ಯಂತ ೩ ಜೈಭೀಮ್ ತಂಡಗಳಾಗಿ ಪ್ರವಾಸ ಮಾಡಿ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.
ಆರ್‌ಪಿಐ(ಬಿ) ಮತ್ತು ದಸಂಸ ವತಿಯಿಂದ ಇಂದು ನಗರದ ವಸಂತ ನಗರದ ಲಿಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ದುಂಡು ಮೇಜಿನ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜಾತಿಗಣತಿ ಶೀಘ್ರ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಲು ವಿಚಾರ ಸಂಕಿರಣ, ಜಾಗೃತಿ ಆಂದೋಲನಾ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.
ರಾಜ್ಯ ಸರ್ಕಾರ ೨೦೨೩-೨೪ನೇ ಸಾಲಿನಲ್ಲಿ ಪರಿಶಿಷ್ಠರ ಅಭಿವೃದ್ಧಿಯ ಎಸ್‌ಸಿಎಸ್ ಪಿ/ಟಿಎಸ್ ಪಿ ಯ ೨೫ ಸಾವಿರ ಕೋಟಿ ಹಣವನ್ನು ಸರ್ಕಾರ ೫ ಗ್ಯಾರಂಟಿ ಯೋಜನೆ,ಇತರೆ ಸಾಮಾನ್ಯ ಯೋಜನೆಗೆ ದುರುಪಯೋಗ ಪಡಿಸಿರುವುದರ ವಿರುದ್ಧ ತೀವ್ರತರ ಹೋರಾಟ ರೂಪಿಸಲು ತೀರ್ಮಾನ ಕೈಗೊಳ್ಳಲಾಯಿತು.
ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಅಸಹಾಯಕರು, ದುರ್ಬಲರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ವಿರುದ್ಧ ಹೋರಾಟ, ಸೇರಿದಂತೆ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ ಪಿಐ (ಬಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ದಸಂಸ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿರವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕೂಡಲೇ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು,ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಜಾರಿ ಮಾಡದೆ ಸರ್ಕಾರ ಮತ್ತೊಮ್ಮೆ ಪರಿಶಿಷ್ಟರ ಸಮುದಾಯದಲ್ಲಿ ನಿರಾಶೆ ಮೂಡಿಸಿ ಆತಂಕಕ್ಕೀಡು ಮಾಡಿದೆ ಎಂದು ತಿಳಿಸಿದರು.
